ಕೊಪ್ಪಳ: ದಕ್ಷಿಣ ಭಾರತದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ತುಂಗಭದ್ರಾ (Tungabhadra) ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತುಹೋಗಿ (Koppala) ಇಂದಿಗೆ ಎರಡು ವರ್ಷ ಪೂರೈಸಿದೆ. 2024ರ ಆಗಸ್ಟ್ 10ರ ರಾತ್ರಿ ನಡೆದ ಈ ಘಟನೆ ತುಂಗಭದ್ರಾ ಯೋಜನೆಯ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿ ದಾಖಲಾಗಿದೆ.
ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಸುಮಾರು 70 ವರ್ಷಗಳ ಇತಿಹಾಸದಲ್ಲಿ 19ನೇ ಗೇಟ್ ಕಿತ್ತುಹೋದ ಘಟನೆ ಆತಂಕ ಮೂಡಿಸಿತ್ತು. ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಯೋಜನೆ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಲಕ್ಷಾಂತರ ರೈತರಿಗೂ ಪ್ರಮುಖ ಆಧಾರವಾಗಿದೆ.
ಈ ಜಲಾಶಯವನ್ನು ನಂಬಿಕೊಂಡು ಮೂರು ರಾಜ್ಯಗಳ ರೈತರು ಪ್ರತಿವರ್ಷ ಎರಡು ಬೆಳೆಗಳಷ್ಟು ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಗೇಟ್ ಕಿತ್ತುಹೋದ ಸಂದರ್ಭದಲ್ಲಿ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ತಜ್ಞರ ತಂಡ ತುರ್ತು ಕಾರ್ಯಾಚರಣೆ ನಡೆಸಿ ಜಲಾಶಯಕ್ಕೆ ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಂಡಿತ್ತು.

ಇದೀಗ 19ನೇ ಗೇಟ್ ಮಾತ್ರವಲ್ಲದೆ ಜಲಾಶಯದ ಎಲ್ಲಾ 33 ಸ್ಪಿಲ್‌ವೇ ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಜಲಾಶಯದ ಸುರಕ್ಷತೆ ಮತ್ತು ನೀರು ನಿರ್ವಹಣೆಗೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ.
ರಾತ್ರಿ 10:50ಕ್ಕೆ ಸಂಭವಿಸಿದ ದುರಂತ
2024ರ ಆಗಸ್ಟ್ 10ರಂದು ಜಲಾಶಯದಲ್ಲಿ ನೀರಿನ ಮಟ್ಟ ಭರ್ತಿಯ ಹಂತದಲ್ಲಿತ್ತು. 12ರಿಂದ 21ರವರೆಗೆ ಒಟ್ಟು 10 ಗೇಟ್‌ಗಳನ್ನು ಸುಮಾರು 1.5 ಅಡಿ ಎತ್ತರಕ್ಕೆ ಎತ್ತಿ ನೀರು ಹೊರಬಿಡಲಾಗುತ್ತಿತ್ತು. ಇದನ್ನೂ ಓದಿ: ತಮ್ಮ ಕನಸಿನ ಕೂಸು ಬಿಡದಿ ಟೌನ್‌ಶಿಪ್‌ಗೆ ಹೆಚ್‌ಡಿಕೆ ಪಿತಾಮಹ – ಎಂ.ಬಿ ಪಾಟೀಲ್
ರಾತ್ರಿ 10:50ರ ಸುಮಾರಿಗೆ 19ನೇ ಗೇಟ್‌ನ ಚೈನ್‌ನ ಒಂದು ಲಿಂಕ್ ತುಂಡಾದ ಪರಿಣಾಮ ಗೇಟ್ ತನ್ನ ಗ್ರೂಪ್‌ನಿಂದ ಕಿತ್ತುಹೋಯಿತು. ಇದರಿಂದ ಅಪಾರ ಪ್ರಮಾಣದ ನೀರು ಹೊರಹರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆ ಸಂದರ್ಭದಲ್ಲಿ ಜಲಾಶಯದಲ್ಲಿ ಸುಮಾರು 100 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದ ಭದ್ರತೆಯ ದೃಷ್ಟಿಯಿಂದ ಎಲ್ಲಾ 33 ಗೇಟ್‌ಗಳನ್ನು ತೆರೆಯಲಾಗಿದ್ದು, ಒಟ್ಟು ಹೊರಹರಿವು 1 ಲಕ್ಷ ಕ್ಯೂಸೆಕ್‌ಗೂ ಅಧಿಕವಾಗಿತ್ತು. 19ನೇ ಗೇಟ್‌ನಿಂದಲೇ ಸುಮಾರು 35 ಸಾವಿರ ಕ್ಯೂಸೆಕ್ ನೀರು ಹೊರಹರಿದಿತ್ತು.
ಸ್ಟಾಪ್‌ಲಾಗ್‌ನಿಂದ ತುರ್ತು ರಕ್ಷಣೆ
19ನೇ ಗೇಟ್ ಕಿತ್ತುಹೋದ ಬಳಿಕ ನೀರು ನಿರಂತರವಾಗಿ ಹೊರಹೋಗುತ್ತಿದ್ದರಿಂದ ರೈತರು ಆತಂಕಗೊಂಡಿದ್ದರು. ತಜ್ಞರ ನೆರವಿನಿಂದ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರಿನ ಹರಿವನ್ನು ನಿಯಂತ್ರಿಸಲಾಯಿತು. ಈ ತುರ್ತು ಕಾರ್ಯಾಚರಣೆಯಿಂದ ಜಲಾಶಯದಲ್ಲಿದ್ದ ಸುಮಾರು 80 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.
70 ವರ್ಷ ಹಳೆಯ ಗೇಟ್‌ಗಳಿಗೆ ವಿದಾಯ
ಗೇಟ್ ಕಿತ್ತುಹೋದ ಘಟನೆಯ ಬಳಿಕ ತಜ್ಞರ ಶಿಫಾರಸಿನ ಮೇರೆಗೆ ಕೇವಲ 19ನೇ ಗೇಟ್ ಬದಲಿಸುವ ಬದಲು ಜಲಾಶಯದ ಎಲ್ಲಾ 33 ಹಳೆಯ ಗೇಟ್‌ಗಳನ್ನು ಬದಲಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸುಮಾರು 70 ವರ್ಷ ಹಳೆಯ ಗೇಟ್‌ಗಳ ಬದಲಾವಣೆಗೆ 51 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಯಿತು. ನಿಗದಿತ ಸಮಯದಲ್ಲೇ ಎಲ್ಲಾ ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, 2026ರ ಜೂನ್ 25ರಂದು 33 ಹೊಸ ಕ್ರಸ್ಟ್ ಗೇಟ್‌ಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವು ಮೂರು ರಾಜ್ಯಗಳ ನೀರಿನ ಸಹಕಾರಕ್ಕೂ ಮಹತ್ವದ ಘಟ್ಟವಾಯಿತು. ಇದನ್ನೂ ಓದಿ: ಆಹಾರ ಸರಬರಾಜು ನಿಗಮದ ಗೋದಾಮಿನಲ್ಲೇ ವಂಚನೆ; ಅಧಿಕಾರಿ-ಸಿಬ್ಬಂದಿಯಿಂದ 86 ಲಕ್ಷ ಮೌಲ್ಯದ ಅಕ್ಕಿ, ಗೋಧಿ, ರಾಗಿ ಲೂಟಿ
ಒಂದು ಕಡೆ 2024ರ ಆಗಸ್ಟ್ 10 ರೈತರ ಪಾಲಿಗೆ ಆತಂಕದ ಕಪ್ಪು ದಿನವಾಗಿದ್ದರೆ, ಮತ್ತೊಂದೆಡೆ 2026ರಲ್ಲಿ 33 ಹೊಸ ಗೇಟ್‌ಗಳ ಅಳವಡಿಕೆ ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ನೀರಾವರಿ ಭವಿಷ್ಯಕ್ಕೆ ಹೊಸ ಅಧ್ಯಾಯ ತೆರೆದಿದೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರ ಯೋಜನೆ ಇದೀಗ ಹಳೆಯ ಗೇಟ್‌ಗಳ ಆತಂಕದಿಂದ ಹೊರಬಂದು ಹೊಸ ತಾಂತ್ರಿಕ ವ್ಯವಸ್ಥೆಯೊಂದಿಗೆ ಮುನ್ನಡೆಯುತ್ತಿದೆ.
ರೈತರಲ್ಲಿ ಹೆಚ್ಚಿದ ಆಶಾಭಾವ
ಜಲಾಶಯದ ಗೇಟ್ ಕಿತ್ತುಹೋದ ಘಟನೆ ನಡೆದು ಎರಡು ವರ್ಷ ಪೂರೈಸಿರುವ ಸಂದರ್ಭದಲ್ಲಿ ಜಲಾಶಯ ಮತ್ತೆ ಭರ್ತಿಯಾಗುವ ಹಂತಕ್ಕೆ ಬಂದಿದೆ. ಸದ್ಯ ಜಲಾಶಯದಲ್ಲಿ ಸುಮಾರು 72 ಟಿಎಂಸಿ ನೀರು ಸಂಗ್ರಹವಾಗಿದ್ದು, 42,112 ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದೆ.
ಇನ್ನೂ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗುವ ಭರವಸೆ ಮೂಡಿದೆ. ಹೀಗಾಗಿ ಎಡದಂಡೆ, ಬಲದಂಡೆ, ವಿಜಯನಗರ, ರಾಯ ಹಾಗೂ ಬಸವ ಕಾಲುವೆಗಳಿಗೆ ಮತ್ತು ನದಿಗೆ ನೀರು ಹರಿಸುವ ಕುರಿತು ಐಸಿಸಿ ಸಭೆಯನ್ನು ಆಗಸ್ಟ್ 11, 2026ರಂದು ಕರೆಯಲಾಗಿದೆ. ಸಭೆಯ ಬಳಿಕ ಕಾಲುವೆಗಳಿಗೆ ನೀರು ಹರಿಸುವ ನಿರೀಕ್ಷೆ ಇರುವುದರಿಂದ ರೈತರಲ್ಲೂ ಆಶಾಭಾವನೆ ಹೆಚ್ಚಾಗಿದೆ.

