– ಟೆಕ್ಕಿಯ ಡ್ರಂಕ್ & ಡ್ರೈವ್‌ನಿಂದ ಅವಘಡ
ಹೈದರಾಬಾದ್: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 8 ಕಾರ್ಮಿಕರಿಗೆ ಕಾರು (Car) ಗುದ್ದಿಕೊಂಡು ( Hit And Run) ಹೋದ ಭೀಕರ ಘಟನೆ ಹೈದರಾಬಾದ್‌ನ (Hyderabad) ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಕಾರು ಡಿಕ್ಕಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆ.29ರ ಮುಂಜಾನೆ ಬಿಹಾರ ಮೂಲದ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಹಿಂದಿನಿಂದ ವೇಗವಾಗಿ ಬಂದ ಕಾರು ಪಾದಾಚಾರಿಗಳಿಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ 7-8 ಮಂದಿ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೇಕು ಅಂತಲೇ ಬೈಕ್‌ಗೆ ಕಾರಿಂದ ಡಿಕ್ಕಿ ಆರೋಪ: ಗುರುಗ್ರಾಮ್ ಹಿಟ್ & ರನ್ ಕೇಸ್‌ನ ಮತ್ತೊಂದು ವಿಡಿಯೋ ವೈರಲ್
ಪೊಲೀಸರು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿರುವ ಕುಶೈಗುಡ ಪೊಲೀಸರು, ಮೌಲಾ ಅಲಿಯ ಬಳಿಯ ಬಾರ್ & ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ ಕುಮಾರ್ (25) ಸೇರಿದಂತೆ ಉಳಿದ ಕಾರ್ಮಿಕರು ಕೆಲಸ ಮುಗಿಸಿ ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಅಜಯ್ ಕುಮಾರ್, ಬಿಪಿನ್ ಕುಮಾರ್ ಯಾದವ್ ಮತ್ತು ರಾಜೇಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಇಬ್ಬರು ಅರೆಸ್ಟ್
ಪಾದಾಚಾರಿಗಳಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೊಬ್ಬನನ್ನು ಕುಶೈಗುಡ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪವನ್ ಮತ್ತು ಆತನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪವನ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ. ಇದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಚಾಮರಾಜನಗರ | ಹನೂರು ಬಳಿ ಹಿಟ್ & ರನ್‌ಗೆ ಮೂವರು ಬಲಿ – ಡಿಕ್ಕಿಯ ರಭಸಕ್ಕೆ ಕಾಲುಗಳೇ ಕಟ್!

