ನವದೆಹಲಿ: ಗುರುಗ್ರಾಮ್‌ನ ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿಡಿಯೋ ಹೊರಬಿದ್ದಿದ್ದು, ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳೆಯೊಬ್ಬರ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ದೃಶ್ಯದ ಮತ್ತೊಂದು ವಿಡಿಯೋ ಇದಾಗಿದೆ.
ಘಟನೆ ನಡೆದಾಗ ಆ ಮಹಿಳೆಯ ಹಿಂದೆಯೇ ವಾಹನ ಚಲಾಯಿಸುತ್ತಿದ್ದ ಅವರ ಪರಿಚಯಸ್ಥರೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅವರು ಬೈಕರ್‌ಗಳ ಗುಂಪಿನೊಂದಿಗೆ ತಮ್ಮ ‘ಏಪ್ರಿಲಿಯಾ ಆರ್‌ಎಸ್ 457’ (Aprilia RS 457) ಸ್ಪೋರ್ಟ್ಸ್ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಬಿಳಿ ಬಣ್ಣದ ಸೆಡಾನ್ ಕಾರೊಂದು ಮಹಿಳೆಯನ್ನು ಹಿಂಬಾಲಿಸಿ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಕಾರು ಚಾಲಕನೆಂದು ಆರೋಪಿಸಲಾದ ವ್ಯಕ್ತಿಯನ್ನು ಕಲ್ಯಾಣ್ ಬೈನ್ಸ್ಲಾ ಎಂದು ಗುರುತಿಸಲಾಗಿದೆ.
ಇನ್‌ಸ್ಟಾದ ‘youknowabhishek_’ ಖಾತೆಯಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಆಗಿದ್ದು, ಕಾರು ಚಾಲಕ ಉದ್ದೇಶಪೂರ್ವಕವಾಗಿಯೇ ಆ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಗುರುಗ್ರಾಮ್ ಯುವತಿಯರಿಗೆ ಸುರಕ್ಷಿತವಾಗಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಈ ವಿಡಿಯೋ ಕ್ಲಿಪ್‌ನಲ್ಲಿ ನೀವು ನೋಡುವಂತೆ, ಆ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಆಕೆಯ ಬೈಕ್‌ಗೆ ಕಾರಿಂದ ಡಿಕ್ಕಿ ಹೊಡೆಸಿದ್ದಾನೆ. ಆತ ಆಕೆಯನ್ನು ನಿಲ್ಲುವಂತೆ ಹೇಳಿದ್ದರೂ, ತನ್ನ ಸುರಕ್ಷತೆಯ ದೃಷ್ಟಿಯಿಂದ ಆಕೆ ನಿಲ್ಲಲಿಲ್ಲ. ಹೀಗಾಗಿ ಆತ ಆಕೆಗೆ ಬಲವಾಗಿ ಡಿಕ್ಕಿ ಹೊಡೆದು ಪರಾರಿಯಾದ ಎಂದು ವಿಡಿಯೋ ಹಂಚಿಕೊಂಡಿರುವಾತ ಬರೆದುಕೊಂಡಿದ್ದಾನೆ.

