ರಾಮನಗರ: ಹಿಂದೆ ರೈತರಿಂದ ಪೆನ್ನು, ಪೇಪರ್ ಕೇಳಿದ್ದ ಡಿ.ಕೆ. ಶಿವಕುಮಾರ್ (D K Shivakumar) ಅವರೇ, ಈಗ ನೀವೇ ಸಿಎಂ ಅಧಿಕಾರದಲ್ಲಿದ್ದೀರಿ. ಆ ಪೆನ್ನು ಮತ್ತು ಪೇಪರ್ ಅನ್ನು ಯಾರ ಉದ್ದಾರಕ್ಕಾಗಿ ಬಳಸುತ್ತಿದ್ದೀರಿ? 33 ಸಾವಿರ ಕೋಟಿ ರೂಪಾಯಿ ಹಣ ಮಾಡಲು ಪೆನ್ನು, ಪೇಪರ್ ಬಳಸುತ್ತಿದ್ದೀರಾ? ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಸಿಎಂ ಆದರೆ ನಮ್ಮ ಕುಟುಂಬ ಸಹಿಸಲ್ಲ ಎಂದು ಹೇಳುತ್ತೀರಿ. ಆದರೆ, ದೇವೇಗೌಡರು ನಿಮಗೂ ಒಳ್ಳೆಯ ಕೆಲಸ ಮಾಡಿ ಎಂದು ಹಾರೈಸಿದ್ದಾರೆ. ನೀವು ಅಧಿಕಾರಕ್ಕೆ ಬಂದಿದ್ದಕ್ಕೆ ನಮಗೇನೂ ಹೊಟ್ಟೆಕಿಚ್ಚಿಲ್ಲ. ಆದರೆ, ನಿಮ್ಮ ಅಧಿಕಾರ ಜನಪರವಾಗಿದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರೈತರ ಹೊಟ್ಟೆ ಮೇಲೆ ಹೊಡೆದು ಟೌನ್‌ಶಿಪ್ ಮಾಡಬೇಡಿ – ಸರ್ಕಾರದ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ
ಕನಕಪುರದಲ್ಲಿ ರೈತರಿಗೆ ಜಮೀನು ಮಾರಬೇಡಿ ಎಂದು ಬುದ್ಧಿವಾದ ಹೇಳುವ ನೀವೇ, ಇಲ್ಲಿ (ಬಿಡದಿ ಭಾಗದಲ್ಲಿ) ರೈತರ ಜಮೀನನ್ನು ಕಬಳಿಸಲು ಮುಂದಾಗಿದ್ದೀರಿ. ಹಿಂದೆ ಎಕರೆಗೆ 2 ಕೋಟಿ ರೂ. ಕೊಡುವುದಾಗಿ ಹೇಳಿದ್ದವರು, ಈಗ ದಿಢೀರನೆ 3 ಕೋಟಿ ರೂ. ಕೊಡುವುದಾಗಿ ಏಕೆ ಘೋಷಿಸಿದ್ರಿ? ಯೋಜನೆ ಜಾರಿಗೆ ನಿಮ್ಮ ಬಳಿ ಹಣವಿದೆಯೇ? ಇದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ದೇವೇಗೌಡರ ಕೈಕಾಲುಗಳಿಗೆ ವಯಸ್ಸಾಗಿರಬಹುದು, ಆದರೆ, ಅವರ ಮನೋಶಕ್ತಿ ಮತ್ತು ಹೋರಾಟದ ಕಿಚ್ಚಿಗೆ ವಯಸ್ಸಾಗಿಲ್ಲ. ನಮ್ಮ ಪಾದಯಾತ್ರೆಗೆ ಸರ್ಕಾರ ಸಂಪೂರ್ಣವಾಗಿ ಹೆದರಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡುತ್ತಿದೆ. ಫ್ರೀಡಂ ಪಾರ್ಕ್‌ವರೆಗೆ ತಲುಪಬೇಕಾದ ನಮ್ಮ ಪಾದಯಾತ್ರೆಯನ್ನು ತಡೆಯಲು ಪೊಲೀಸರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಹಿಂದೆ ನೀವೇ ಸ್ವತಃ ಮೇಕೆದಾಟು ಯೋಜನೆಗಾಗಿ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡಿದ್ದಾಗ ಅದು ಕಾನೂನುಬಾಹಿರವಾಗಿರಲಿಲ್ಲವೇ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಮತ್ತು ಹೋರಾಟಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರ ಬೆದರಿ ಈ ರೀತಿಯ ಹತಾರಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಕಣ್ಣಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳಲು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸುಪ್ರೀಂ ಅನುಮತಿ

