– ಸಹೋದರಿಗೆ ಗಂಭೀರ ಗಾಯ
ಇಸ್ಲಾಮಾಬಾದ್: ಪಾಕಿಸ್ತಾನದ ಜನಪ್ರಿಯ ಟಿಕ್‌ಟಾಕ್ ಸ್ಟಾರ್ (TikTok Star) ಶಂಸು ಬೀಬಿ (Shamsu Bibi) ಅಲಿಯಾಸ್ ಆಯೆಶಾ ಗಿಲಮಾನಾ (Ayesha Gilamana) ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟ್ಯಾಕ್ಸಿಲಾದಲ್ಲಿ (Taxila) ನಡೆದಿದೆ.
ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಸು ಬೀಬಿ ಅವರ ತಂದೆ ಫಝಲ್ ಸಾಹಿಬ್‌ಝಾದಾ ಅವರು ನೀಡಿರುವ ಮಾಹಿತಿಯ ಪ್ರಕಾರ, ಕಶಿಶ್ ಅಲಿಯಾಸ್ ಕಾಶಿ ಎಂಬಾತ ಶಂಸು ಬೀಬಿಗೆ ಕರೆ ಮಾಡಿ ಮನೆಯ ಹೊರಗೆ ಬರುವಂತೆ ಹೇಳಿದ್ದಾನೆ. ಬಳಿಕ ಅವರು ತಮ್ಮ 15 ವರ್ಷದ ಸಹೋದರಿ ಅಸಿಮಾ ಹಾಗೂ ಸಹೋದರ ನೈಮತುಲ್ಲಾ ಜೊತೆ ಕಾರಿನಲ್ಲಿ ಹೊರಟಿದ್ದರು. ಇದನ್ನೂ ಓದಿ: ವಿಜಯ್ ರೀತಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಯಶ್? – ರಾಕಿಂಗ್‌ಸ್ಟಾರ್ ಉತ್ತರ ಏನು?
ಪೆಟ್ರೋಲ್ ಪಂಪ್ ಬಳಿ ದಾಳಿ:
ನೈಮತುಲ್ಲಾ ಅವರ ಹೇಳಿಕೆಯ ಪ್ರಕಾರ, ಪೆಟ್ರೋಲ್ ಪಂಪ್‌ವೊಂದರ ಬಳಿ ಕಾರು ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ 30ರಿಂದ 35 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಗುಂಡು ಶಂಸು ಬೀಬಿಗೆ ಅವರ ಕುತ್ತಿಗೆಗೆ ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಂಸು ಬೀಬಿ ಅವರ 15 ವರ್ಷದ ಸಹೋದರಿ ಅಸಿಮಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆ.28ರ ಒಳಗೆ ಉಳಿಕೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಮಧು ಬಂಗಾರಪ್ಪ
13 ಲಕ್ಷ ಫಾಲೋವರ್ಸ್:
ಶಂಸು ಬೀಬಿ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಟಿಕ್‌ಟಾಕ್ ವಿಡಿಯೋಗಳನ್ನು ಮಾಡುತ್ತಿದ್ದರು ಎಂದು ಅವರ ತಂದೆ ತಿಳಿಸಿದ್ದಾರೆ. ಅವರ ಹತ್ಯೆಯ ಬಳಿಕ ಕುಟುಂಬಸ್ಥರು ಟಿಕ್‌ಟಾಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅವರ ಸಹೋದರ ರಹ್ಮತುಲ್ಲಾ ಅವರ ಪ್ರಕಾರ, ಶಂಸು ಬೀಬಿ ಅವರ ಟಿಕ್‌ಟಾಕ್ ಖಾತೆಗೆ ಸುಮಾರು 3ರಿಂದ 3.5 ಕೋಟಿ ಲೈಕ್ಸ್ ಬಂದಿದ್ದವು. ಅಲ್ಲದೆ 13 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ನಟ ದರ್ಶನ್‌ಗೆ ಸೊಳ್ಳೆ ಕಾಟ
ಹಣಕಾಸಿನ ವ್ಯವಹಾರಕ್ಕೆ ಕೊಲೆ ಶಂಕೆ:
ಕುಟುಂಬಸ್ಥರ ಆರೋಪದ ಪ್ರಕಾರ, ಶಂಸು ಬೀಬಿ ಅವರು ಕೌಸರ್ ಹಾಗೂ ಜಾವೇದ್ ಅಲಿಯಾಸ್ ಶಾಹೀನ್ ಎಂಬವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದರು. ತಮ್ಮ ಹಣವನ್ನು ವಾಪಸ್ ನೀಡುವಂತೆ ಅವರು ಇಬ್ಬರನ್ನೂ ಕೇಳುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಶಂಸು ಬೀಬಿ ಇಸ್ಲಾಮಾಬಾದ್‌ನಲ್ಲೂ ದೂರು ದಾಖಲಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ರು – ಹನೂರು ಎನ್‌ಕೌಂಟರ್ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಶಂಸು ಬೀಬಿ ಅವರನ್ನು ಹತ್ಯೆ ಮಾಡಿರುವುದು ಇದೇ ವ್ಯಕ್ತಿಗಳಾಗಿರಬಹುದು ಅಥವಾ ಅವರ ಸೂಚನೆಯ ಮೇರೆಗೆ ಅಪರಿಚಿತರು ದಾಳಿ ನಡೆಸಿರಬಹುದು ಎಂದು ಅವರ ತಂದೆ ಆರೋಪಿಸಿದ್ದಾರೆ. ಹಣವನ್ನು ಪಡೆದುಕೊಳ್ಳುವ ಉದ್ದೇಶದಿಂದಲೇ ಹತ್ಯೆ ನಡೆದಿರಬಹುದು ಎಂಬ ಶಂಕೆಯನ್ನೂ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಕಶಿಶ್ ಅಲಿಯಾಸ್ ಕಾಶಿಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ದಾಳಿಕೋರರ ಗುರುತು ಹಾಗೂ ಹತ್ಯೆಯ ಹಿಂದಿರುವ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ಉಚಿತ ಎಲೆಕ್ಟ್ರಿಕ್ ಸ್ಟೌ’ ಸುಳ್ಳು ಸಂದೇಶವನ್ನು ನಂಬಬೇಡಿ: ಪ್ರಹ್ಲಾದ್ ಜೋಶಿ ಎಚ್ಚರಿಕೆ

