ಕನ್ನಡದಲ್ಲಿ ಯಶ್ ಇತ್ತೀಚೆಗೆ ‘ಆಪ್ ಕಿ ಅದಾಲತ್’ (Yash In Appki Adalat Show) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಚಿತ್ರರಂಗದಲ್ಲಿ ಯಶಸ್ಸು ಬಂದ ಬಳಿಕ ಹಲವರು ಬದಲಾಗುತ್ತಾರೆ ಎಂಬ ಮಾತಿದೆ. ಆದರೆ ಯಶ್ ಮಾತ್ರ ತಮ್ಮ ತತ್ವಗಳಿಗೆ ರಾಜಿಯಾಗದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಆಯ್ಕೆಯಾಗಲಿ, ಪಾತ್ರಗಳ ಆಯ್ಕೆಯಾಗಲಿ ಅಥವಾ ವೃತ್ತಿ ಬದುಕಿನ ನಿರ್ಧಾರಗಳಾಗಲಿ, ಯಶ್ ಎಂದಿಗೂ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ಅದಕ್ಕಾಗಿಯೇ ‘ಕೆಜಿಎಫ್’ ಬಳಿಕ ವರ್ಷಗಳ ಅಂತರ ಬಂದರೂ ಅಭಿಮಾನಿಗಳು ಯಶ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಯಶ್ ಬರೀ ಸಿನಿಮಾ ಮಾಡುವುದಿಲ್ಲ, ಇತಿಹಾಸ ಸೃಷ್ಟಿಸುವ ಸಿನಿಮಾ ಮಾಡುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದೀಗ ಹೆಸರಾಂತ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಜನಪ್ರೀತಿ ಗಳಿಸಿರುವ ಯಶ್ ಅವರ ಮುಂದಿನ ಗುರಿ ಏನು? ಅವರು ರಾಜಕೀಯಕ್ಕೆ ಬರ್ತಾರಾ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.
ಯಶ್ ‘ಯಶೋಮಾರ್ಗ’ ಹೆಸರಿನಲ್ಲಿ ಟ್ರಸ್ಟ್ ಹುಟ್ಟುಹಾಕಿದ್ದು, ಇದರ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಕೊಪ್ಪಳದಲ್ಲಿ ಕೆರೆಯೊಂದರ ಅಭಿವೃದ್ಧಿಗೆ ನೆರವಾಗಿದ್ದರು. ಚಾಮರಾಜಪೇಟೆಯ ಗೋಶಾಲೆಯ ಗೋವುಗಳಿಗೆ ಬರದ ಸಮಯದಲ್ಲಿ ಆಹಾರ ಪೂರೈಸಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ನಟ ದರ್ಶನ್‌ಗೆ ಸೊಳ್ಳೆ ಕಾಟ
ಕೋವಿಡ್ ಸಮಯದಲ್ಲಿ ಚಿತ್ರರಂಗದ ಒಕ್ಕೂಟದ ಬಡ ಕಾರ್ಮಿಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ನೆರವಾಗಲು 3,000ಕ್ಕೂ ಹೆಚ್ಚು ಜನರಿಗೆ ಆರ್ಥಿಕ ಸಹಾಯ ಮಾಡಿದ್ದರು. ಇದಕ್ಕಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಹಣವನ್ನು ಯಶ್ ವ್ಯಯಿಸಿದ್ದರು.
ಇಷ್ಟೆಲ್ಲಾ ಯಶ್ ಯಾಕೆ ಮಾಡುತ್ತಿದ್ದಾರೆ? ಜನಸೇವೆ ಮಾಡುವ ಉದ್ದೇಶ ಇದೆಯಾ? ಎಂಬ ಪ್ರಶ್ನೆಗಳು ಆಗಾಗ್ಗೆ ಕೇಳಿಬರುತ್ತವೆ. ನಟನಾಗಿ ಭಿನ್ನವಾಗಿ ಗುರುತಿಸಿಕೊಂಡಿರುವ ಯಶ್, ತಾವು ಅಂದುಕೊಂಡಿದ್ದನ್ನು ಮಾಡುತ್ತಾ ಬಂದಿದ್ದಾರೆ. ಸ್ಯಾಂಡಲ್‌ವುಡ್ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲೂ ಯಶ್ ಯಶಸ್ವಿಯಾಗಿದ್ದಾರೆ.
ಹಾಗಾದರೆ ಮುಂದೇನು? ಇದೇ ಕುತೂಹಲದಿಂದ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ‘ವಿಜಯ್ ರೀತಿ ನೀವೂ ರಾಜಕೀಯಕ್ಕೆ ಪ್ರವೇಶ ಮಾಡುವ ಉದ್ದೇಶ ಹೊಂದಿದ್ದೀರಾ?’ ಎಂದು ಯಶ್ ಅವರಿಗೆ ಪ್ರಶ್ನೆ ಕೇಳಿದ್ದಾರೆ.
ರಾಜಕೀಯ ಪ್ರವೇಶದ ಪ್ರಶ್ನೆಗೆ ಯಶ್ ಉತ್ತರ ಏನು?
ಈ ಪ್ರಶ್ನೆಗೆ ಯಶ್ ನೇರವಾಗಿ ಹೌದು ಅಥವಾ ಇಲ್ಲ ಎನ್ನದೆ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಸದ್ಯಕ್ಕೆ ನನಗೆ ಅನ್ನಿಸುತ್ತಿದೆ ನಾನು ಸಿನಿಮಾದಲ್ಲಿ ಮಾಡೋದು ಸಾಕಷ್ಟಿದೆ ಅಂತ. ಇಂಡಸ್ಟ್ರಿಯನ್ನು ಇನ್ನೂ ಉತ್ತಮವಾಗಿ ತೆಗೆದುಕೊಂಡು ಹೋಗೋದು ಹೇಗೆ ಅನ್ನೋದ್ರ ಬಗ್ಗೆ ಯೋಚಿಸುತ್ತಿದ್ದೇನೆ. ಇದರರ್ಥ ನನಗೆ ರಾಜಕೀಯದಲ್ಲಿ ಜಿಗುಪ್ಸೆ ಇದೆ ಅನ್ನೋದಲ್ಲ. ಸಮಯ ಬಂದರೆ, ಸಮಾಜಮುಖಿಯಾಗಿ ಕೆಲಸ ಮಾಡೋದು ಅನಿವಾರ್ಯವಾದರೆ ಬಳಿಕ ನಿರ್ಧರಿಸುತ್ತೇನೆ. ಸದ್ಯಕ್ಕಂತೂ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ ಎಂದು ಯಶ್ ಹೇಳಿದ್ದಾರೆ. ಇದನ್ನೂ ಓದಿ: NH 66 ಚಿತ್ರದ ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್
ಹೀಗೆ ಯಶ್ ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಭವಿಷ್ಯದಲ್ಲಿ ಪರಿಸ್ಥಿತಿ ಬಂದರೆ ಸಮಾಜಮುಖಿಯಾಗಿ ಕೆಲಸ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಯಶ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ತಮಿಳುನಾಡಿನಲ್ಲಿ ನಟ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲೂ ಯಶ್ ರಾಜಕೀಯಕ್ಕೆ ಬರಬಹುದು ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಆದರೆ, ಸದ್ಯಕ್ಕೆ ಯಶ್ ಅವರ ಗಮನ ಸಿನಿಮಾ ಮತ್ತು ಚಿತ್ರರಂಗದ ಮೇಲಿದೆ. ಮುಂದೊಂದು ದಿನ ರಾಜಕೀಯದ ಬಗ್ಗೆ ಯಶ್ ಅವರಿಂದ ಮತ್ತೊಂದು ಸ್ಪಷ್ಟ ಉತ್ತರ ಸಿಗುತ್ತದೆಯೇ ಎಂಬುದು ಸದ್ಯಕ್ಕೆ ಕುತೂಹಲ. ಎಲ್ಲವೂ ಕಾಲಕ್ಕೆ ಬಿಟ್ಟ ವಿಚಾರ.
