– ಬೇಟೆಗಾರರು ಅರಣ್ಯದಲ್ಲಿ 5 ರಿಂದ 8 ಕಿಮೀ ಓಡಾಡಿದ್ದಾರೆ
ಬೇಟೆಗಾರರು ಎತ್ತರದ ಪ್ರದೇಶದಲ್ಲಿದ್ರು… ಅಸ್ಪಷ್ಟವಾಗಿ ಗೋಚರಿಸ್ತಿದ್ರು… ಶರಣಾಗುವಂತೆ ಅಧಿಕಾರಿಗಳು ಮನವಿ ಮಾಡಿದ್ರೂ ಕೇಳದೇ ಗುಂಡು ಹಾರಿಸಿದ್ರು. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಉದ್ದೇಶದಿಂದ ಪ್ರತಿದಾಳಿ ನಡೆಸಿದ್ರು…. ಹನೂರಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್ (Hanur Encounter) ಪ್ರಕರಣ ಸಂಬಂಧ ಸದನಕ್ಕೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ನೀಡಿದ ಉತ್ತರ ಹೀಗಿತ್ತು.

ಸಚಿವ ರಾಮಲಿಂಗಾರೆಡ್ಡಿ ಸುದೀರ್ಘ ಉತ್ತರದಲ್ಲಿ ಏನಿದೆ? ಆ ರಾತ್ರಿ ಅರಣ್ಯದಲ್ಲಿ ನಡೆದಿದ್ದೇನು?
ಶಾಗ್ಯ ಶಾಖೆಯ ಹೊಳೆಮುರಿದ ಕಟ್ಟಿ ಗಸ್ತಿನ ಚುಕ್ಕಲ್ಲೂರು ಮೀಸಲು ಅರಣು ಪ್ರದೇಶದಲ್ಲಿ ವನ್ಯಜೀವಿ ಕಳ್ಳಬೇಟೆಗಾಗಿ ಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಬಗ್ಗೆ ಆ.14 ರ ರಾತ್ರಿ 8 ಗಂಟೆ ಸುಮಾರಿಗೆ ಅರಣು ಸಿಬ್ಬಂದಿಗೆ ಮಾಹಿತಿ ಬಂದಿತ್ತು. ಮಾಹಿತಿ ಪಡೆದ ಕೂಡಲೇ ಅರಣ್ಯ ಸಿಬ್ಬಂದಿ 2 ತಂಡಗಳಾಗಿ ಆ ಅರಣ್ಯ ಪ್ರದೇಶ ಸುತ್ತಮುತ್ತ ಕಾರ್ಯಾಚರಣೆ ನಡೆಸಲು ಶುರು ಮಾಡಿದ್ರು.

ಕಲ್ಲುಬಂಡೆಗಳ ಮರೆಯಲ್ಲಿ ಅವಿತಿದ್ದರು
ಗೋಮಡಿನಹಳ್ಳ ಅರಣ್ಯ, ಹಳೆಯೂರುನತ್ತ ಅರಣ್ಯ, ಗಣಿಗಲ ಮರದ ವಾಚ್ ಟವರ್, ಮೂಸಿಮರದ ಆಗ್ಗು ಅರಣ್ಯ ಪ್ರದೇಶ ಸೇರಿದಂತೆ ಅನೇಕ ಕಡೆ ಕಾರ್ಯಾಚರಣೆ ನಡೆಸಿದ್ರು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಯದ್ದಾಗಿ ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶದಲ್ಲಿ ಕಲ್ಲುಬಂಡೆಗಳು ಮತ್ತು ಪೊದೆಯ ಮರೆಯಲ್ಲಿ ಅವಿತಿದ್ದರು. ಬೇಟೆಗಾರರು ಅರಣ್ಯ ಸಿಬ್ಬಂದಿಯನ್ನ ನೋಡಿ ಅಕ್ರಮ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಲು ಮುಂದಾದರು. ಆಗಸ್ಟ್ 15ರಂದು ಬೆಳಗಿನ ಜಾವ ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಚಲನವಲನ ಪತ್ತೆಯಾಗಿದೆ. ಈ ವೇಳೆ ಬೇಟೆಗಾರರು ಅಕ್ರಮ ನಾಡ ಬಂದೂಕಿನಿಂದ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ. ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಬ್ಯಾಟರಿ ಬೆಳಕು ಕಂಡು ಬಂತು.
ಬಂಡೆ ಬಳಿ ಬೇಟೆಗಾರರು ಇದ್ದಿದ್ದು ಗೊತ್ತಾಗಿ ಶರಣಾಗುವಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದರು. ಈ ವೇಳೆ ಬೇಟೆಗಾರರ ಕಡೆಯಿಂದ ಗುಂಡಿನ ದಾಳಿ ನಡೀತು. ಆತ್ಮರಕ್ಷಣೆಗೆ ಇಲಾಖಾ ಸಿಬ್ಬಂದಿ ಕೂಡ ಗುಂಡಿನ ಪ್ರತಿದಾಳಿ ನಡೆಸಿದರು. ಈ ವೇಳೆ ಬೇಟೆಗಾರರು ಎತ್ತರದ ಪ್ರದೇಶದಲ್ಲಿದ್ರು, ಅಸ್ಪಷ್ಟವಾಗಿ ಗೋಚರಿಸ್ತಿದ್ರು. ಗುಂಡಿನ ದಾಳಿ ಉದ್ದೇಶಪೂರ್ವಕ ಆಗಿರಲಿಲ್ಲ. ಬೇಟೆಗಾರರಿಂದ ಕೂಗಾಟ, ಕಿರುಚಾಟ ಕೇಳಿ ಬಂತು, ಸಿಬ್ಬಂದಿ ಸಮೀಪಕ್ಕೆ ಹೋದಾಗ ಒಬ್ಬ ಓಡಿ ಹೋಗುತ್ತಿದ್ದದ್ದು ಕಂಡುಬಂದಿತು.
ನಂತರ ಮೂವರಿಗೆ ಗುಂಡು ತಗುಲಿತ್ತು, ಅವರು ಮೃತಪಟ್ಟ ಬಗ್ಗೆ ವೈದ್ಯರು ಖಚಿತಪಡಿಸಿದರು. ಮೃತರನ್ನು ಅಂತೋಣಿಸ್ವಾಮಿ (50), ಜಾನ್‌ರೋಸ್ ಪೀಟರ್ (42) ಹಾಗೂ ಕುಮಾರ್ (33) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಮಹಿಮದಾಸ್ (45) ಪರಾರಿಯಾಗಿದ್ದಾನೆ. ಮೂವರ ಮೃತದೇಹಗಳನ್ನು ಮೈಸೂರಿಗೆ ಸ್ಥಳಾಂತರ ಮಾಡಲಾಯ್ತು.

ಈ ಕಾರ್ಯಾಚರಣೆಯಲ್ಲಿ ಒಟ್ಟು 10 ಸಿಬ್ಬಂದಿ ಭಾಗವಹಿಸಿದ್ರು. ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅರಣ್ಯ ಕಾಯ್ದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಬೇಟೆಗಾರರಿಂದ ಎರಡು ಬಂದೂಕು, ಕಾಡತೂಸುಗಳು, ಎರಡು ಬ್ಯಾಗ್, ಅದರೊಳಗಿದ್ದ ತಟ್ಟೆ, ಸ್ಪೂನ್, ದಿನಸಿ, ಬಿಸ್ಜತ್ತು, ಮೊಬೈಲ್ ಗಳು, ಚಾಕುಗಳು, ಪಟಾಕಿ, ಮದ್ದಿನ ಬಾಕ್ಸ್, ನಾಡಬಂದೂಕು ಗುಂಡುಗಳು, ಚಾರ್ಜರ್ ಬ್ಯಾಟರಿ, ಮೊಬೈಲ್ ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ.
20-35 ಕೆಜಿ ಜಿಂಕೆ ಮಾಂಸ ಜಪ್ತಿ
ಬೇಟೆಗಾರರ ಬ್ಯಾಗ್‌ನಲ್ಲಿ ಪ್ರಾಣಿ ಮಾಂಸ ಬ್ಯಾಗ್‌ನಲ್ಲಿ ಪತ್ತೆ ಆಗಿದೆ. 20-35 ಕೆಜಿಯಷ್ಟು ಜಿಂಕೆ ಮಾಂಸವನ್ನ ವಶಕ್ಕೆ ಪಡೆಯಲಾಗಿದೆ. ಮೃತ ಬೇಟೆಗಾರರು ಅನುಮತಿ ಇಲ್ಲದೇ ಅರಣ್ಯ ಪ್ರವೇಶ ಮಾಡಿದ್ದರು, ಬೇರೆ ಯಾವ ಪ್ರಕರಣಗಳಲ್ಲಿ ಭಾಗವಹಿಸಿದ್ದಾರೆ ಅಂತ ಪರಿಶೀಲನೆ ಮಾಡಲಾಗಿದೆ. ಬೇಟೆಗಾರರು ಅರಣ್ಯದಲ್ಲಿ 5 ರಿಂದ 8 ಕಿಮೀ ಓಡಾಡಿದ್ದಾರೆ ಎಂದು ವಿವರಿಸಿದರು.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಕೊಳ್ಳೇಗಾಲ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಮುಂದುವರಿಸಲಾಗಿದೆ. ಘಟನೆಯ ಬಳಿಕ ಕೆಲ ದುಷ್ಕರ್ಮಿಗಳು ಅರಣ್ಯ ಇಲಾಖೆಯ ಬೇಟೆ ತಡೆ ಶಿಬಿರಗಳು, ವಸತಿಗೃಹಗಳು ಹಾಗೂ ಇಲಾಖೆಯ ವಾಹನಗಳಿಗೆ ಹಾನಿ ಮಾಡಿರುವ ಬಗ್ಗೆಯೂ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗಿದೆ.
ಬೇಟೆಗಾರರು ಯಾವುದೇ ಅನುಮತಿ ಇಲ್ಲದೆ ಮೀಸಲು ಅರಣ್ಯ ಪ್ರದೇಶಕ್ಕೆ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ್ದು, ವನ್ಯಪ್ರಾಣಿ ಬೇಟೆಯಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಸಿಬ್ಬಂದಿ ಆತ್ಮರಕ್ಷಣೆ ಹಾಗೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಉದ್ದೇಶದಿಂದ ಪ್ರತಿದಾಳಿ ನಡೆಸಿದ್ದಾರೆ ಎಂದು ಸಿವರು ಸ್ಪಷ್ಟನೆ ನೀಡಿದರು.
