Connect with us

Crime

60 ವರ್ಷದ ವೃದ್ಧೆಯನ್ನೂ ಬಿಡದ ಕಾಮುಕರು – ಅತ್ಯಾಚಾರ ಎಸಗಿ ಕೊಲೆ

Published

on

ಅಮರಾವತಿ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ನಂತರ ಇದೀಗ ಆಂಧ್ರ ಪ್ರದೇಶ ಮತ್ತೊಂದು ಅಸಹ್ಯಕರ ಘಟನೆಗೆ ಸಾಕ್ಷಿಯಾಗಿದೆ.

ಕಾಮುಕರು 60 ವರ್ಷದ ವೃದ್ಧೆಯನ್ನೂ ಬಿಡದೆ ಅತ್ಯಾಚಾರ ಎಸಗುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದು, ಅಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ಘಟನೆ ನಡೆದಿದೆ.

ಎಸ್‍ಪಿ ನಯೀಮ್ ಅಸ್ಮಿ ಅವರು ಮನೆಯನ್ನು ಪರಿಶೀಲಿಸಿದ್ದು, ಈ ವೇಳೆ ಮನೆತುಂಬಾ ಖಾರದ ಪುಡಿ ಚೆಲ್ಲಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಎಸ್‍ಪಿ ನಯೀಮ್ ಅಸ್ಮಿ ಅವರ ಪ್ರಕಾರ, ಕಳೆದ ರಾತ್ರಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಮೂವರು ಶಂಕಿತರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ. ಕೆಲವು ಸುಳಿವುಗಳು ಸಿಕ್ಕಿದ್ದು, ಮುಂದಿನ ತನಿಖೆಯನ್ನು ನಡೆಸುತ್ತಿದ್ದು, 12 ಗಂಟೆಗಳಲ್ಲಿ ನಾವು ಪ್ರಕರಣವನ್ನು ಬೇಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಭಾನುವಾರ 70 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿದ ಪ್ರಕರಣ ಉತ್ತರ ಪ್ರದೇಶದ ಸೋನ್‍ಭದ್ರಾ ಜಿಲ್ಲೆಯಲ್ಲಿ ನಡೆದಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ವೃದ್ಧೆಯು ಒಬ್ಬಳೆ ಇದ್ದ ವೇಳೆ 27 ವರ್ಷದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಸರ್ಕಲ್ ಆಫೀಸರ್ ಜ್ಞಾನ್ ಪ್ರಕಾಶ್ ಅವರು ಮಾಹಿತಿ ನೀಡಿದ್ದರು.

ಡಿಸೆಂಬರ್ 2ರಂದು ಆರೋಪಿಯನ್ನು ಬಂಧಿಸಿದ್ದೆವು. ಅತ್ಯಾಚಾರ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿತ್ತು. ವ್ಯಕ್ತಿಯು ವೃತ್ತಿಯಲ್ಲಿ ಬಡಗಿಯಾಗಿದ್ದ ವೃದ್ಧೆಯು ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಳು ಎಂದು ವಿವರಿಸಿದರು.

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು ಐದು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ತೆಲಂಗಾಣ ಅತ್ಯಾಚಾರ ಪ್ರಕರಣದ ಕುರಿತು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಹೈದರಾಬಾದ್ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.