– ವಿರಾಟ್ ಪರ ಬ್ಯಾಟ್ ಬೀಸಿದ ಫಾಫ್ ಡು ಪ್ಲೆಸಿಸ್
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಐಪಿಎಲ್‌ನಲ್ಲಿ ಮತ್ತೆ ಕಳಪೆ ಸ್ಟ್ರೈಕ್‌ರೇಟ್ ಮುಂದುವರಿಸಿದ್ದಾರೆ. ಇದರಿಂದ ಹಿರಿಯ ಕ್ರಿಕೆಟಿಗರೂ ವಿರಾಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೊಹ್ಲಿಯನ್ನು ಟಿ20 ವಿಶ್ವಕಪ್‌ನಿಂದ ಕೈಬಿಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಹೌದು. ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಿಧಾನಗತಿಯ ಶತಕವಾಗಿತ್ತು. ಗುರುವಾರ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದಲ್ಲೂ 118.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 43 ಎಸೆತಗಳಲ್ಲಿ ಕೇವಲ 51 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಬೌಂಡರಿ, ಒಂದೇ ಒಂದು ಸಿಕ್ಸರ್ ದಾಖಲಾಗಿದೆ. ಇದು ಕೆಲ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ.
Advertisement
Advertisement
ಹೈದರಾಬಾದ್ ವಿರುದ್ಧ ಕೊಹ್ಲಿಯೊಂದಿಗೆ ಕಣಕ್ಕಿಳಿದಿದ್ದ ರಜತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ್ದರು. ನಂತರ ಬಂದ ಕ್ಯಾಮರೂನ್ ಗ್ರೀನ್ 185 ಸ್ಟ್ರೈಕ್‌ರೇಟ್‌ನಲ್ಲಿ 37 ರನ್ ಚಚ್ಚಿದ್ದರು. ಆದ್ರೆ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 51 ರನ್ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡರು. ಹಾಗಾಗಿ ಕೊಹ್ಲಿ ಕಳಪೆ ಸ್ಟ್ರೈಕ್‌ರೇಟ್ ವಿರುದ್ಧ ಸುನೀಲ್ ಗವಾಸ್ಕರ್, ಇರ್ಫಾನ್ ಪಠಾಣ್ ಅಸಮಾಧಾನ ಹೊರಹಾಕಿದ್ದಾರೆ.
Advertisement
ಕೊಹ್ಲಿ ಬೆನ್ನಿಗೆ ನಿಂತ ಕ್ಯಾಪ್ಟನ್:
ವಿರಾಟ್ ಕೊಹ್ಲಿ ಸದ್ಯ ಅಗ್ರ ಸ್ಕೋರರ್ ಆಗಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ ಕೊಹ್ಲಿ ರನ್ ಕಲೆಹಾಕುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಹೋರಾಟ ಉತ್ತಮವಾಗಿತ್ತು. ಕೆಕೆಆರ್ ವಿರುದ್ಧ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ 1 ರನ್‌ನಿಂದ ಸೋಲಬೇಕಾಯಿತು. ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಮಾತ್ರ ರನ್ ಗಳಿಸುತ್ತಿದ್ದರು. ಈಗ ಇತರ ಆಟಗಾರರು ರನ್ ಗಳಿಸುತ್ತಿದ್ದಾರೆ. ಕ್ಯಾಮರೂನ್ ಗ್ರೀನ್ ಸಹ ಫಾರ್ಮ್‌ಗೆ ಮರಳಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Advertisement
ತವರಿನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ 287 ರನ್ ಗಳಿಸಿದ್ದಾಗ ನಮ್ಮ ತಂಡ 262 ರನ್ ಗಳಿಸಿತ್ತು. ಇದು ಸಹ ಉತ್ತಮ ಪೈಪೋಟಿ ಆಗಿತ್ತು. ಏಕೆಂದರೆ ಆ ಸಮಯದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಕಾರಣ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಬಾರಿಸಿತ್ತು. 207 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.