ಬೆಂಗಳೂರು: ಡಾಬಸಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ( KWIN CITY) ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂ. ಹೂಡಿಕೆಯೊಂದಿಗೆ ಜಾಗತಿಕ ಮಟ್ಟದ ತನ್ನ ‘ಬಿಝ್ಇಂಟೆಲ್ ಹಬ್ʼ ಸ್ಥಾಪಿಸಲಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ (M.B Patil) ಅವರ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಮತ್ತು ಟೊಯೋಟಾ ಕಂಪನಿಯು ಪರವಾಗಿ ಅದರ ಸಿಓಓ ಮತ್ತು ವಿಶೇಷ ಯೋಜನೆಯ ನಿರ್ದೇಶಕ ಸುದೀಪ್ ದಳವಿ ಅವರು ಈ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಿದರು. ಇದನ್ನೂ ಓದಿ: ಮೇ 27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ʻರಾಷ್ಟ್ರೀಯ ಎಐ & ಡಿಜಿಟಲ್ ವಾಟರ್ ಶೃಂಗಸಭೆ 2026′
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಹೂಡಿಕೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಈ ರೀತಿಯ ಘಟಕ ಸ್ಥಾಪನೆ ಆಗುತ್ತಿರುವುದು ವಿಶ್ವದಲ್ಲೇ ಮೊದಲು ಎನ್ನುವ ವಿಷಯ ಕೇಳಿ ಸಂತಸವಾಯಿತು ಎಂದು ಅವರು ಹೇಳಿದರು.
TOYOTA CHOOSES KARNATAKA FOR A LANDMARK GLOBAL EXPANSION
MoU signed for the Toyota BizIntel Hub in KWIN CITY with an investment of ₹1,200 Cr – marking the first anchor investment for KWIN CITY.
A major opportunity for our youth, this would be Toyota’s first facility of its… pic.twitter.com/hthWcJuauX
— M B Patil (@MBPatil) May 25, 2026
ಸಚಿವ ಪಾಟೀಲ್ ಮಾತನಾಡಿ, ಇದು ಕ್ವಿನ್ ಸಿಟಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಕಂಪನಿಯು ಐದು ವರ್ಷಗಳಲ್ಲಿ 1,200 ಕೋಟಿ ರೂ.ಗಳನ್ನು ಆರಂಭಿಕ ಬಂಡವಾಳವಾಗಿ ಹೂಡಲಿದ್ದು, ಇದರಿಂದ 200 ಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕಾಗಿ ಅಲ್ಲಿ ಟೊಯೋಟಾ ಕಂಪನಿಗೆ 300 ಎಕರೆ ಭೂಮಿ ಒದಗಿಸಲಾಗುವುದು. ಇಲ್ಲಿ ವಾಹನಗಳ ತಯಾರಿಕೆ, ಪರೀಕ್ಷೆಗಳು, ಆಧುನಿಕ ವಾಹನ ತಯಾರಿಕಾ ಸ್ಥಾವರ ಆರಂಭ ಎಲ್ಲವೂ ನಡೆಯಲಿವೆ. ಇದು ರಾಜ್ಯದ ಯುವಜನರಿಗೆ ವರದಾನವಾಗಲಿದೆ ಎಂದಿದ್ದಾರೆ.

ಕ್ವಿನ್ ಸಿಟಿಯಲ್ಲಿ ನಾವೀನ್ಯತೆ, ಆರೋಗ್ಯ ಸೇವೆಗಳು ಮತ್ತು ಐಟಿ ತಂತ್ರಜ್ಞಾನಕ್ಕೆ ಅಗ್ರ ಆದ್ಯತೆ ಕೊಡಲಾಗುವುದು. ಇಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದ ಏಳೆಂಟು ವಿಶ್ವವಿದ್ಯಾಲಯಗಳು, ಆರೋಗ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಅವುಗಳೊಂದಿಗೂ ಆದಷ್ಟು ತ್ವರಿತವಾಗಿ ಒಡಂಬಡಿಕೆಗೆ ಅಂತಿಮರೂಪ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಅತ್ಯಾಧುನಿಕ ನಗರವು ಒಟ್ಟು 5,800 ಎಕರೆಯಲ್ಲಿ ಹಂತಹಂತವಾಗಿ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ಯೋಜನೆಗೆ ಒಟ್ಟು 48 ಸಾವಿರ ಕೋಟಿ ರೂಪಾಯಿ ಹೂಡಿಕೆ ಆಗಲಿದ್ದು, ಒಟ್ಟಾರೆಯಾಗಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪಾಟೀಲ ನುಡಿದಿದ್ದಾರೆ.
ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯೆಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಟೊಯೊಟಾ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಯೋಶಿನೋರಿ ನೋರಿಟಾಕೆ, ಉನ್ನತ ಮಟ್ಟದ ಪ್ರತಿನಿಧಿಗಳಾದ ಜಿ.ಶಂಕರ್, ವಿಕ್ರಮ್ ಗುಲಾಟಿ, ಉಪಾಧ್ಯಕ್ಷ ರಮೇಶ್ ರಾವ್, ಜನರಲ್ ಮ್ಯಾನೇಜರ್ ಹೆಚ್ ಜೆ ಕಿರಣ್, ಉಪಸ್ಥಿತರಿದ್ದರು. ಇದನ್ನೂ ಓದಿ: ಖಾಲಿ ಹಂತಕ್ಕೆ ತಲುಪಿದ ಹಿಡಕಲ್ ಜಲಾಶಯ – ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಆತಂಕ
