ಬಳ್ಳಾರಿ: ವಿಜಯನಗರ ಜಿಲ್ಲೆಯಾದ್ಯಂತ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಅನ್ನದಾತರು(Farmers) ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಒಣಗುತ್ತಿರುವ ರಾಗಿ ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ರೈತರು ಟ್ಯಾಂಕರ್(Tanker) ಮೂಲಕ ನೀರು ಹರಿಸುವ ಹರಸಾಹಸಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ನಿಂಬಳಗೇರಿ ಗ್ರಾಮದಲ್ಲಿ ರೈತರ ಈ ಸಂಕಷ್ಟದ ಪರಿಸ್ಥಿತಿ ಎದ್ದು ಕಾಣುತ್ತಿದೆ. ಗ್ರಾಮದ ಪ್ರಮುಖ ರೈತರಾದ ಸುರೇಶ ಶೆಟ್ಟಿ ಹಾಗೂ ಅಂಗಡಿ ಗಂಗಾಧರ ಎಂಬುವವರು ತಮ್ಮ ಒಟ್ಟು 12 ಎಕರೆ ಜಮೀನಿನಲ್ಲಿ ರಾಗಿ(Ragi Crop) ಬಿತ್ತನೆ ಮಾಡಿದ್ದರು. ಆದರೆ, ಸಕಾಲದಲ್ಲಿ ಮಳೆಯಾಗದೆ ಹಾಗೂ ಅಂತರ್ಜಲ ಕುಸಿದು ತೀವ್ರ ನೀರಿನ ಅಭಾವ ಸೃಷ್ಟಿಯಾದ ಕಾರಣ, ತೆನೆ ಕಟ್ಟುವ ಹಂತದಲ್ಲಿದ್ದ ಬೆಳೆ ಸಂಪೂರ್ಣ ಒಣಗಿ ನೆಲಕಚ್ಚುವ ಭೀತಿ ಎದುರಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರ|ಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿ – ಮೋದಿಗೆ ಡಿಕೆಶಿ ಪತ್ರ
ಕಣ್ಣೆದುರೇ ಒಣಗುತ್ತಿರುವ ಬೆಳೆಯನ್ನು ನೋಡಿ ಕಣ್ಣೀರಿಡುತ್ತಿರುವ ರೈತರು, ಕೈಗೆ ಬಂದಷ್ಟು ಫಸಲು ಉಳಿಸಿಕೊಳ್ಳಲು ಖಾಸಗಿ ವಾಟರ್ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ನಿತ್ಯ ಬರೋಬ್ಬರಿ 5,000 ರೂಪಾಯಿ ಬಾಡಿಗೆ ಪಾವತಿಸಿ, ಐದು ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ಹನಿ ನೀರುಣಿಸುತ್ತಿದ್ದಾರೆ. ಕೃಷಿ ವೆಚ್ಚದ ಜೊತೆಗೆ ಈ ಹೆಚ್ಚುವರಿ ಟ್ಯಾಂಕರ್ ಬಾಡಿಗೆ ರೈತರ ಹೆಗಲಿಗೆ ಹೊರೆಯಾಗಿದ್ದು, ಮತ್ತಷ್ಟು ಆರ್ಥಿಕ ಸಾಲದ ಸುಳಿಗೆ ಸಿಲುಕುವ ಆತಂಕ ಸೃಷ್ಟಿಯಾಗಿದೆ.
ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಣ್ಣೆದುರೇ ಒಣಗಲು ಬಿಡಲಾಗದೆ ಸಾಲ ಸೋಲ ಮಾಡಿ ಟ್ಯಾಂಕರ್ ನೀರು ಹರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಈಗಾಗಲೇ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಶೀಘ್ರದಲ್ಲೇ ಬೆಳೆಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕು ಮತ್ತು ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕು ರೈತರು ಒತ್ತಾಯಿಸಿದ್ದಾರೆ.

