– ರಾಜಕೀಯ ಪಕ್ಷಗಳು, ಪುರುಷರು ಆತಂಕ ಪಡಬೇಕಿಲ್ಲ
ಬೆಂಗಳೂರು: ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ರಾಜಕೀಯದಲ್ಲಿ 33% ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯಿಂದ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗುತ್ತದೆ. ಆದ್ರೆ ರಾಜಕೀಯ ನಾಯಕರ ಮನೆಯವರಿಗೆ ಮಾತ್ರ ಅವಕಾಶ ಸಿಗಬಾರದು. ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಹೊಸಬರು ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಸುದೀರ್ಘವಾಗಿ ಅವರು ಮಾತನಾಡಿದರು. ಮಹಿಳಾ ಮೀಸಲಾತಿಯಿಂದ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ಹೊಸಬರು ಬರಬೇಕು, ಕಲಿಬೇಕು, ಭಾಷಣ ಮಾಡಬೇಕು. ಮಹಿಳೆಯರು ಪುರುಷರಿಗಿಂತ ಬಲಿಷ್ಠ, ಹೀಗಾಗಿ ಎಲ್ಲಾರಿಗೂ ಚುನಾವಣೆ ಸ್ಪರ್ಧೆಗೆ ಅವಕಾಶ ಸಿಗಬೇಕು ಎಂದು ಆಗ್ರಹಿಸಿದರು.
ಮಹಿಳಾ ಮೀಸಲಾತಿ ಬಿಲ್ (Womens Reservation Bill) ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. 1996 ರಿಂದ ಬೇರೆಬೇರೆ ಸಂದರ್ಭಗಳಲ್ಲಿ ಈ ಬಿಲ್ ಅನ್ನು ಸಂಸತ್ ನಲ್ಲಿ ತರುವ ಪ್ರಯತ್ನ ಆಗಿತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆ, ಹಲವು ಪಕ್ಷಗಳ ವಿರೋಧದಿಂದ ಬಿಲ್ ತರಲು ಆಗಿರಲಿಲ್ಲ. 2023ರ ಸೆಪ್ಟೆಂಬರ್ ನಲ್ಲಿ ಕೊನೆಗೂ ಈ ಬಿಲ್ ಪಾಸಾಯ್ತು. ರಾಷ್ಟ್ರಪತಿಗಳು ಮಹಿಳಾ ಮೀಸಲಾತಿ ಬಿಲ್ಗೆ ಅಂಕಿತ ಹಾಕಿದ್ರು. ಅದಾದ ನಂತರ ಚರ್ಚೆ ನಡೆಯುತ್ತಿರೋದು, ದೇಶದ ಜನಸಂಖ್ಯೆ ಜಾಸ್ತಿ ಆಗಿದೆ ಅನ್ನೋ ಕಾರಣಕ್ಕೆ ಎಂದರು.
1976 ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ತರಲಾಗಿತ್ತು, 1976 ಜನಗಣತಿ ಆಧರಿಸಿ ಲೋಕಸಭೆ ಸೀಟ್ಗಳು ನಿಗದಿ ಆಯ್ತು. ಆಗ 54 ಕೋಟಿ ಜನಸಖ್ಯೆ ದೇಶದಲ್ಲಿತ್ತು. ಈಗ ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದೆ, 3 ಪಟ್ಟು ಹೆಚ್ಚಾಗಿದೆ. ಹಲವು ಕ್ಷೇತ್ರಗಳಲ್ಲೂ ಜನಸಂಖ್ಯೆ ಹೆಚ್ಚಿದೆ, ಹೀಗಾಗಿ ಅದರಂತೆ ಮಹಿಳಾ ಮೀಸಲಾತಿ ಕೊಡಬೇಕು ಅಂತ ನಿರ್ಧಾರ ಆಯ್ತು. ಕ್ಷೇತ್ರ ಪುನರ್ವಿಂಗಡಣೆ ಬಿಲ್ ಪಾಸಾದ್ರೆ ಲೋಕಸಭೆ ಕ್ಷೇತ್ರಗಳು 850 ಹೆಚ್ಚಾಗ್ತವೆ. ಅದರಂತೆ ಮಹಿಳಾ ಮೀಸಲಾತಿ ಬಿಲ್ ಪಾಸಾದ್ರೆ ಹೆಚ್ಚುವರಿ ಸೀಟುಗಳು ಮಹಿಳೆಯರಿಗೆ ಹೋಗುತ್ತೆ. ಹಾಗಾಗಿ ರಾಜಕೀಯ ಪಕ್ಷಗಳು ಹಾಗೂ ಪುರುಷರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಈಗಲೇ ಸಂಸದರಿಗೆ ಚರ್ಚೆಗೆ ಅವಕಾಶ ಕೊಡ್ತಿಲ್ಲ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೂ ಶೋಭಾ ಕರಂದ್ಲಾಜೆ ಟಕ್ಕರ್ ಕೊಟ್ಟರು. ಅಧಿವೇಶನದ ದಿನಗಳನ್ನ ಹೆಚ್ಚಿಸಲಿ, ವಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಡಲಾಗುತ್ತೆ. ಆದ್ರೆ ವಿಪಕ್ಷಗಳು ಎಷ್ಟು ಸಲ ಚರ್ಚೆಯಲ್ಲಿ ಪಾಲ್ಗೊಂಡಿವೆ? ಅನವಶ್ಯಕ ಧರಣಿ ಮಾಡಿ ಅಡ್ಡಿಪಡಿಸ್ತಾರೆ ಎಂದು ತಿವಿದರು.

