ಬೆಳಗಾವಿ: ಡಿಸೆಂಬರ್ 2ರಿಂದ ಕುಂದಾನಗರಿ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಂದರೆ ಬರೋಬ್ಬರಿ 7,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ.
ಬಂದೋಬಸ್ತ್ಗೆ ಆಗಮಿಸುವ ಪೊಲೀಸರಿಗೆ ಯಾವುದೇ ತೊಂದರೆಯಾಗದಂತೆ ಸುವರ್ಣ ವಿಧಾನಸೌಧದ ಸಮೀಪದಲ್ಲೇ ಬೃಹತ್ ‘ಪೊಲೀಸ್ ಟೌನ್ಶಿಪ್’ ನಿರ್ಮಿಸಲಾಗಿದೆ. ಇಲ್ಲಿ ಒಂದೇ ಸೂರಿನಡಿ ಬರೋಬ್ಬರಿ 2,500 ಪೊಲೀಸ್ ಸಿಬ್ಬಂದಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.
ಬೃಹತ್ ಜರ್ಮನ್ ಟೆಂಟ್ಗಳನ್ನು ಹಾಕಿ, ಪ್ರತಿಯೊಬ್ಬರಿಗೂ ಪ್ರತ್ಯೇಕ ಕಾಟ್, ಬೆಡ್ ಹಾಗೂ ಬೆಡ್ಶೀಟ್ ವ್ಯವಸ್ಥೆ ಮಾಡಲಾಗಿದೆ.ವಾಸ್ತವ್ಯದ ಸ್ಥಳದಲ್ಲೇ ಬಿಸಿ ನೀರಿನ ಸೌಲಭ್ಯ ಹಾಗೂ ಗುಣಮಟ್ಟದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದಿನವಿಡೀ ಕರ್ತವ್ಯ ನಿರ್ವಹಿಸಿ ಬರುವ ಪೊಲೀಸರ ಒತ್ತಡ ನಿವಾರಣೆಗಾಗಿ ಟೌನ್ಶಿಪ್ನಲ್ಲಿ ಮನೋರಂಜನಾ ವೇದಿಕೆಯನ್ನೂ ನಿರ್ಮಾಣ ಮಾಡಲಾಗಿದೆ. ತುರ್ತು ಸಂದರ್ಭಗಳಿಗಾಗಿ ಒಂದು ವೈದ್ಯಕೀಯ ತಂಡ ಹಾಗೂ ಅಗ್ನಿಶಾಮಕ ದಳದ ತಂಡವನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.
ನೂತನವಾಗಿ ನಿರ್ಮಾಣವಾಗಿರುವ ಟೌನ್ಶಿಪ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರು ಭೇಟಿ ನೀಡಿ, ಸಿಬ್ಬಂದಿಯ ವಾಸ್ತವ್ಯ, ಊಟ ಹಾಗೂ ಇತರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿಗೆ ಯಾವುದಕ್ಕೂ ಕೊರತೆಯಾಗದಂತೆ ಅಚ್ಚುಕಟ್ಟಾಗಿ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧದ ಒಳಗೆ, ಹೊರಗೆ, ಪ್ರತಿಭಟನಾ ಸ್ಥಳಗಳು ಸೇರಿದಂತೆ ನಗರದ ಆಯಕಟ್ಟಿನ ಎಲ್ಲಾ ಪ್ರದೇಶಗಳಲ್ಲಿಯೂ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.

