– ಮಂದಿರ ಟ್ರಸ್ಟ್‌ನ ಹಲವಾರು ಹಿರಿಯ ಅಧಿಕಾರಿಗಳ ಪಾತ್ರವೂ ಅನುಮಾನಾಸ್ಪದ
ಅಯೋಧ್ಯೆ : ಶ್ರೀರಾಮ ಮಂದಿರದ ದೇಣಿಗೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanth) ಅವರಿಗೆ ಸಲ್ಲಿಸಿದೆ. ಪ್ರಕರಣದಲ್ಲಿ ರಾಮ ಮಂದಿರ (Ra Mandir) ಟ್ರಸ್ಟ್‌ನ ಹಲವಾರು ಹಿರಿಯ ಅಧಿಕಾರಿಗಳ ಪಾತ್ರವೂ ಅನುಮಾನಾಸ್ಪದವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.
ಎಸ್‌ಐಟಿ (SIT) ತನಿಖೆಯು ಎಣಿಕೆ ಸಿಬ್ಬಂದಿ ಮಾತ್ರವಲ್ಲದೆ ಟ್ರಸ್ಟ್‌ನ ಸುಮಾರು ಮೂವತ್ತು ವ್ಯಕ್ತಿಗಳು ಭಾಗಿಯಾಗಿರುವುದನ್ನು ಬಹಿರಂಗಪಡಿಸಿದೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ಟಿನ್ನು ಯಾದವ್, ಲವ್‌ಕುಶ್ ಮತ್ತು ಅನುಕಲ್ಪ್ ಸೇರಿದಂತೆ ಐದು ಜನರನ್ನು ಎಸ್‌ಐಟಿ (SIT) 20 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ಈ ವೇಳೆ ಅವರು ಸರಿಯಾಗಿ ಉತ್ತರ ಕೊಡದ ಕಾರಣ ಮತ್ತು ಅವರ ಹತ್ತಿರ ಸಿಕ್ಕ ಹಣಕ್ಕೆ ಬಲವಾದ ಆಧಾರ ಇರುವುದರಿಂದ, ಅವರ ಮೇಲೆ ಅನುಮಾನ ಹೆಚ್ಚಾಗಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ನೀಡಿದ್ದ 3 ಕೆ.ಜಿ ತೂಕದ ಬೆಳ್ಳಿಯ ಹಾರ, ಪಾದುಕೆ ನಾಪತ್ತೆ
ತನಿಖೆಯ ಆಧಾರದ ಮೇಲೆ, ಚಂಪತ್ ರಾಯ್ ಅವರ ಆಪ್ತರಾದ ಟಿನ್ನು ಯಾದವ್, ಲವ್‌ಕುಶ್ ಮತ್ತು ಅನುಕಲ್ಪ್ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಎಸ್‌ಐಟಿ (SIT) ಸಿದ್ಧತೆ ನಡೆಸುತ್ತಿದೆ. ಆದರೆ ತನಿಖಾ ವರದಿ ಹಾಗೂ ಸರ್ಕಾರದ ಪರಿಶೀಲನೆಯ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವೇ (Central Govt) ಟ್ರಸ್ಟ್ ರಚಿಸಿರುವುದರಿಂದ, ಪಿಎಂಒ ನೀಡುವ ನಿರ್ದೇಶನಗಳ ಆಧಾರದ ಮೇಲೆಯೇ ಟ್ರಸ್ಟ್ ಅನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯ ರಾಮಮಂದಿರದ ಕಳ್ಳತನ ಪ್ರಕರಣವನ್ನು ಪ್ರಧಾನ ಮಂತ್ರಿ ಕಚೇರಿ (PMO) ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಿಎಂಒ ಅಧಿಕಾರಿಗಳು ಈಗಾಗಲೇ ದೇವಾಲಯಕ್ಕೆ ಬಂದು ತನಿಖೆ ನಡೆಸಿ, ರಹಸ್ಯ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಟ್ರಸ್ಟ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಕ್ರಮಗಳ ಬಗ್ಗೆ ಉಲ್ಲೇಖವಿದೆ ಎಂದು ಮೂಲಗಳು ಹೇಳಿವೆ.
ದೇಣಿಗೆ ಹಣ ಎಣಿಸುವ ಕೆಲಸದಲ್ಲಿದ್ದ 40 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅವರ ಜಾಗಕ್ಕೆ ಬ್ಯಾಂಕ್‌ನ ಹೊಸ ಸಿಬ್ಬಂದಿಯನ್ನು ತರಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಟ್ರಸ್ಟ್‌ನ ಪ್ರಮುಖ ಅಧಿಕಾರಿಗಳು ಅಯೋಧ್ಯೆ ಬಿಟ್ಟು ಹೊರಗೆ ಹೋಗದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣದಲ್ಲಿ ಬ್ಯಾಂಕ್ ನೌಕರರ ಪಾತ್ರ ಗಂಭೀರ – ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಆರೋಪ
