– 16 ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿ
ಆಮ್‌ಸ್ಟೆಲ್ವಿನ್: ಇಂದು ಹಾಕಿ ವಿಶ್ವಕಪ್‌ನಲ್ಲಿ (Hockey world Cup 2026) ಬರೋಬ್ಬರಿ 16 ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿವೆ. (India Vs Pakistan) ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಇದೇ ಮೈದಾನದಲ್ಲಿ 1973ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ್ದವು. ಆ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಗೆದ್ದಿತ್ತು. 62ನೇ ನಿಮಿಷದಲ್ಲಿ ಬಿ.ಪಿ. ಗೋವಿಂದ ಭಾರತದ ಪರ ಗೆಲುವಿನ ಗೋಲು ಬಾರಿಸಿದ್ದರು. ಇದೀಗ 53 ವರ್ಷಗಳ ಬಳಿಕ ಇದೇ ಮೈದಾನದಲ್ಲಿ ಮತ್ತೆ ಉಭಯ ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.
ಭಾರತಕ್ಕೆ ಗೆಲುವು ಅಥವಾ ಡ್ರಾ ಬೇಕು
ಭಾರತ ‘ಡಿ’ ಗುಂಪಿನಲ್ಲಿ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ 3-1 ಗೆಲುವು ಸಾಧಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-4 ಅಂತರದಲ್ಲಿ ಸೋಲು ಕಂಡಿತ್ತು. ಸದ್ಯ ಭಾರತ 3 ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ವೇಲ್ಸ್ ಹಾಗೂ ಪಾಕಿಸ್ತಾನ ತಲಾ ಒಂದು ಅಂಕ ಹೊಂದಿವೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯ ಭಾರತಕ್ಕೆ ತುಂಬಾ ಮುಖ್ಯ. ಗೆದ್ದರೆ ನೇರವಾಗಿ ಮುಂದಿನ ಹಂತಕ್ಕೆ ಹೋಗುವ ಅವಕಾಶ ಸಿಗಲಿದೆ. ಕನಿಷ್ಠ ಡ್ರಾ ಸಾಧಿಸಿದರೂ ಭಾರತಕ್ಕೆ ಮುಂದಿನ ಸುತ್ತಿನ ಬಾಗಿಲು ತೆರೆಯಲಿದೆ. ಆದರೆ, ಪಾಕಿಸ್ತಾನಕ್ಕೆ ಇದು ಇನ್ನಷ್ಟು ಮಹತ್ವದ ಪಂದ್ಯ. ಭಾರತ ವಿರುದ್ಧ ಗೆದ್ದರೆ ಮುಂದಿನ ಹಂತಕ್ಕೇರುವ ಅವಕಾಶ ಪಾಕಿಸ್ತಾನಕ್ಕೂ ಸಿಗಲಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿಗಾಗಿ ಭರ್ಜರಿ ಹೋರಾಟ ನಡೆಸುವ ನಿರೀಕ್ಷೆಯಿದೆ.
16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಮುಖಾಮುಖಿ
ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ 2010ರ ವಿಶ್ವಕಪ್ ವೇಳೆ ನವದೆಹಲಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರಾಜ್‌ಪಾಲ್ ಸಿಂಗ್ ನಾಯಕತ್ವದ ಭಾರತ ತಂಡ ಪಾಕಿಸ್ತಾನವನ್ನು 4-1 ಗೋಲುಗಳಿಂದ ಸೋಲಿಸಿತ್ತು.
ಇದೀಗ 16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಮತ್ತೆ ಈ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದ್ದು, ಅದೇ ಆತ್ಮವಿಶ್ವಾಸದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.
ವಿಶ್ವಕಪ್‌ನಲ್ಲಿ ಭಾರತ-ಪಾಕ್ ಲೆಕ್ಕಾಚಾರ
ಹಾಕಿ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೆ 5 ಬಾರಿ ಮುಖಾಮುಖಿಯಾಗಿವೆ. 1971, 1973, 1975, 1986 ಹಾಗೂ 2010ರಲ್ಲಿ ಈ ಪಂದ್ಯಗಳು ನಡೆದಿವೆ. ಈ ಐದು ಪಂದ್ಯಗಳಲ್ಲಿ ಭಾರತ 3 ಬಾರಿ ಗೆದ್ದಿದ್ದರೆ, ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆದ್ದಿದೆ. ಭಾರತ ಪಾಕಿಸ್ತಾನದ ವಿರುದ್ಧ ಒಟ್ಟು 10 ಗೋಲುಗಳನ್ನು ಗಳಿಸಿದೆ.
2010ರ ವಿಶ್ವಕಪ್ ಪಂದ್ಯದಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದ್ದ ಸಂದೀಪ್ ಸಿಂಗ್, ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
ಒಟ್ಟಿನಲ್ಲಿ, ಇದು ಕೇವಲ ಮತ್ತೊಂದು ಲೀಗ್ ಪಂದ್ಯವಲ್ಲ. 16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಭಾರತ-ಪಾಕ್ ಕದನ. ಒಂದು ಕಡೆ ಭಾರತದ ಮುಂದಿನ ಹಂತದ ಟಿಕೆಟ್, ಮತ್ತೊಂದು ಕಡೆ ಪಾಕಿಸ್ತಾನದ ಪಾಲಿಗೆ ಅವಕಾಶದ ಬಾಗಿಲು. ಹೀಗಾಗಿ ಇಂದಿನ ಪಂದ್ಯಕ್ಕಾಗಿ ಹಾಕಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


