ಲಕ್ನೋ: ಉದ್ಯಮಿಯೊಬ್ಬರು 2025ರ ಅಕ್ಟೋಬರ್‌ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ (Ayodhya Ram Mandir) 3 ಕೆ.ಜಿ ತೂಕದ ಬೆಳ್ಳಿಯ ಹಾರ (Sliver Chain) ಮತ್ತು ಬೆಳ್ಳಿಯ ಚರಣ ಪಾದುಕೆಯನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ದೇವಸ್ಥಾನದ ಕಡೆಯಿಂದ ಅವರಿಗೆ ಈವರೆಗೆ ಅಧಿಕೃತ ರಶೀದಿ ಸಿಕ್ಕಿಲ್ಲ. ಆಭರಣಗಳು ಕೂಡ ಕಾಣೆಯಾಗಿವೆ ಎನ್ನುವ ಆರೋಪ ಕೇಳಿಬಂದಿದೆ.
ಮುಂಬೈನ ಉದ್ಯಮಿ ಅನಿಲ್ ವಿಶ್ವಕರ್ಮ ಎಂಬುವವರು ಅಯೋಧ್ಯೆಗೆ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲೇ ತಲುಪಿದ್ದರು. ಏಳು ದಿನಗಳ ಸತತ ನಡಿಗೆಯ ಬಳಿಕ ಅವರು ಅಯೋಧ್ಯೆ ತಲುಪಿ ಶ್ರೀರಾಮ ಮಂದಿರಕ್ಕೆ ಕಾಣಿಕೆ ಒಪ್ಪಿಸಿದರು. ಎಂಟು ತಿಂಗಳು ಕಳೆದರೂ ರಶೀದಿ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅನಿಲ್ ವಿಶ್ವಕರ್ಮ ಅವರ ಜೊತೆಗೆ ಕಾಣಿಕೆ ಒಪ್ಪಿಸಲು ಹೋಗಿದ್ದ ವಿನೋದ್ ಮಿಶ್ರಾ ಮಾತನಾಡಿ, ದೇವಸ್ಥಾನದ ಅರ್ಚಕರು ಆ ಕಾಣಿಕೆಗಳನ್ನು ರಾಮಲಲ್ಲಾನ ಪಾದದ ಬಳಿ ಇಟ್ಟು, ನಂತರ ಅದನ್ನು ಮತ್ತೊಬ್ಬ ವ್ಯಕ್ತಿಗೆ ಹಸ್ತಾಂತರಿಸಿದರು. ಅಷ್ಟೇ ಅಲ್ಲದೆ, ಕಾಣಿಕೆಯ ರಶೀದಿ ಮತ್ತು ಪ್ರಭು ಶ್ರೀರಾಮನಿಗೆ ಆ ಬೆಳ್ಳಿಯ ಹಾರವನ್ನು ಧರಿಸಿರುವ ಫೋಟೋವನ್ನು ಶೀಘ್ರದಲ್ಲೇ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು ಆದರೆ ಇಂದಿಗೂ ರಶೀದಿಯಾಗಲಿ ಅಥವಾ ಫೋಟೋ ಆಗಲಿ ಅವರು ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ.
ಉತ್ತರ ಭಾರತದ ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಮುಖ್ಯಸ್ಥ ಅನುರಾಗ್ ರಸ್ತೋಗಿ ಮಾತನಾಡಿ, ದೇಶಾದ್ಯಂತ ಚಿನ್ನದ ವ್ಯಾಪಾರಿಗಳಿಂದ ಸಂಗ್ರಹಿಸಿ, ದಾನಿಗಳ ಹೆಸರು ಮತ್ತು ಗೋತ್ರಗಳನ್ನು ಕೆತ್ತಿ ಇಟ್ಟಿಗೆಗಳ ರೂಪಕ್ಕೆ ಪರಿವರ್ತಿಸಲಾಗಿದ್ದ ಸುಮಾರು 60 ಕೆ.ಜಿ ಬೆಳ್ಳಿಯ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ದೂರಿದ್ದಾರೆ.

ಈ ಬೆಳ್ಳಿ ಇಟ್ಟಿಗೆಗಳನ್ನು ದೇವಸ್ಥಾನದ ಅಡಿಪಾಯಕ್ಕೆ ಬಳಸಬೇಕಾಗಿತ್ತು. ತಮಗೆ ದೇಣಿಗೆಯ ರಶೀದಿ (Donation Receipt) ಸಿಕ್ಕಿದೆಯಾದರೂ, ದೇವಸ್ಥಾನಕ್ಕೆ ಅಡಿಪಾಯ ಹಾಕುವ ಸಮಯದಲ್ಲಿ ಆ ಬೆಳ್ಳಿ ಇಟ್ಟಿಗೆಗಳ ಕಾಣಿಸಲಿಲ್ಲ. ಜೊತೆಗೆ ತಾವು ವೈಯಕ್ತಿಕವಾಗಿ ನೀಡಿದ್ದ ಒಂದು ಕೆಜಿ ತೂಕದ ಬೆಳ್ಳಿಯ ದೀಪ, ಎರಡು ಬೆಳ್ಳಿಯ ಬೌಲ್ ಹಾಗೂ ಒಂದು ಜೋಡಿ ಬೆಳ್ಳಿಯ ನಾಗರ ವಿಗ್ರಹಗಳು ಸಹ ನಾಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣದಲ್ಲಿ ಬ್ಯಾಂಕ್ ನೌಕರರ ಪಾತ್ರ ಗಂಭೀರ – ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಆರೋಪ
ನಾಪತ್ತೆಯಾದ ಹಣ ಹಾಗೂ ಕಾಣಿಕೆಗಳ ಪ್ರಕರಣದಲ್ಲಿ ಸದ್ಯಕ್ಕೆ ಐದು ಜನ ಶಂಕಿತರನ್ನು ಗುರುತಿಸಲಾಗಿದೆ. ಅವರಲ್ಲಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ ಮತ್ತು ಇತರ ಇಬ್ಬರು ಶಾಮೀಲಾಗಿದ್ದಾರೆ. ಈ ಐದೂ ಜನ ದೇವಸ್ಥಾನದ ಕಾಣಿಕೆ ಹಣವನ್ನು ಎಣಿಸುವ ಕೆಲಸದಲ್ಲಿ ತೊಡಗಿದ್ದರು ಎನ್ನಲಾಗಿದೆ.
