ಅಯೋಧ್ಯೆ: ರಾಮಮಂದಿರ (Ram Mandir) ದೇಣಿಗೆ ಹಗರಣದಲ್ಲಿ ಬ್ಯಾಂಕ್ ನೌಕರರ ಪಾತ್ರ ಗಂಭೀರವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ (Nripendra Mishra) ಆರೋಪಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಟ್ರಸ್ಟ್‌ನ ಪ್ರಭಾವಿ ವ್ಯಕ್ತಿಗಳ ಮಾತಿಗೆ ಬಲಿಯಾಗಿದ್ದಾರೆ ಎಂಬುವುದಕ್ಕೆ ಎಸ್‌ಐಟಿ (SIT) ತಂಡಕ್ಕೆ ಕೆಲವು ಸಾಕ್ಷ್ಯಗಳು ಸಿಕ್ಕಿವೆ ಎಂದಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬ್ಯಾಂಕ್ ನೌಕರರು ಟ್ರಸ್ಟ್‌ನ ಅಧಿಕಾರಿಗಳ ಕೆಳಗೆ ಕೆಲಸ ಮಾಡುವವರಂತೆ ನಡೆದುಕೊಂಡಿದ್ದಾರೆ. ಟ್ರಸ್ಟ್ ಅಧಿಕಾರಿಗಳಿಗೆ ಇದ್ದ ಅಧಿಕಾರ ಮತ್ತು ಪ್ರಭಾವವನ್ನು ನೋಡಿ ಬ್ಯಾಂಕ್‌ನವರು, ಅವರು ಹೇಳಿದಂತೆಲ್ಲಾ ಕೇಳುತ್ತಿದ್ದರು. ದೇಣಿಗೆ ಹಣ ಎಣಿಸುವಾಗ ಯಾವುದೇ ತಪ್ಪು ನಡೆಯದಂತೆ ನೋಡಿಕೊಳ್ಳುವ ಸಮಾನ ಜವಾಬ್ದಾರಿ ಬ್ಯಾಂಕ್ ಮತ್ತು ಟ್ರಸ್ಟ್ ಇಬ್ಬರ ಮೇಲೂ ಇತ್ತು. ಆದರೆ, ಟ್ರಸ್ಟ್ ಅಧಿಕಾರಿಗಳ ಒತ್ತಡಕ್ಕೆ ಮಣಿದು, ಬ್ಯಾಂಕ್‌ನವರು ತಮ್ಮ ಜವಾಬ್ದಾರಿಯನ್ನು ಮರೆತು ಕಣ್ಮುಂಚಿಕೊಂಡು ಕುಳಿತಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ – ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ರೂ ಕ್ರಮ ನಿಶ್ಚಿತ: ಸಿಎಂ ಯೋಗಿ ಎಚ್ಚರಿಕೆ
ಮೂಲಗಳ ಪ್ರಕಾರ, ಬ್ಯಾಂಕಿನವರು ದೇಣಿಗೆ ಎಣಿಸುವ ಕೆಲಸವನ್ನು ಒಂದು ಖಾಸಗಿ ಕಂಪನಿಗೆ ವಹಿಸಿದ್ದರು. ಆ ಕಂಪನಿಯು ಹೊರಗಿನ ಜನರನ್ನು ಕೆಲಸಕ್ಕೆ ತಂದು ಹಣ ಎಣಿಕೆ ಮಾಡಲು ಕೂರಿಸಿತ್ತು. ಆದರೆ, ಈ ಖಾಸಗಿ ಕಂಪನಿಗೆ ಕೆಲಸ ಸಿಗುವಂತೆ ಮಾಡಿದ್ದೇ ಟ್ರಸ್ಟ್‌ನ ಅಧಿಕಾರಿಗಳು. ಹಾಗಾಗಿ, ಅಲ್ಲಿ ಕೆಲಸಕ್ಕೆ ಸೇರಿದವರೆಲ್ಲಾ ಟ್ರಸ್ಟ್ ಅಧಿಕಾರಿಗಳ ನೆಂಟರು ಮತ್ತು ಪರಿಚಯಸ್ಥರೇ ಆಗಿದ್ದರು. ಇದರಿಂದಾಗಿ ಬ್ಯಾಂಕ್ ಅಧಿಕಾರಿಗಳು ಏನನ್ನೂ ಕೇಳಲಾಗದೇ ಸುಮ್ಮನಿದ್ದರು. ಕೊನೆಗೆ, ಟ್ರಸ್ಟ್‌ನವರು ಮತ್ತು ಅವರ ಕಡೆಯವರು ಅಂದುಕೊಂಡಂತೆಯೇ ಎಲ್ಲವೂ ನಡೆಯಿತು ಎಂದು ತಿಳಿಸಿದ್ದಾರೆ.
45 ದಿನಗಳವರೆಗೆ ಮಾತ್ರ ಸಿಸಿಟಿವಿ ಬ್ಯಾಕಪ್:
ರಾಮ ಮಂದಿರದ ದೇಣಿಗೆ ಹಣ ಕಳ್ಳತನದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಸಾಕ್ಷಿಗಳನ್ನು ಹುಡುಕುವುದು ಭಾರಿ ಕಷ್ಟವಾಗಿದೆ. ಪ್ರಮುಖ ಸಾಕ್ಷಿಯಾಗಬೇಕಿದ್ದ ಸಿಸಿಟಿವಿ ದೃಶ್ಯಗಳನ್ನು ಈಗಾಗಲೇ ತಿರುಚಿರುವುದು ಕಂಡುಬಂದಿದೆ. ಇಲ್ಲಿನ ಕ್ಯಾಮರಾಗಳಲ್ಲಿ ಕೇವಲ ಇತ್ತೀಚಿನ 45 ದಿನಗಳ ದೃಶ್ಯಗಳು ಮಾತ್ರ ಇರುತ್ತವೆ, ಹಳೆಯವೆಲ್ಲ ತಾನಾಗಿಯೇ ಅಳಿಸಿಹೋಗುತ್ತವೆ. ಸದ್ಯ ಡಿಲೀಟ್ ಆಗಿರುವ ದೃಶ್ಯಗಳನ್ನು ವಾಪಸ್ ಪಡೆಯಲು ಎಸ್‌ಐಟಿ ಫೋರೆನ್ಸಿಕ್ ತಂಡದ ಸಹಾಯ ಪಡೆಯುತ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸಿಬ್ಬಂದಿ ಮನೆಯಲ್ಲಿ 10 ಲಕ್ಷ ಹಣ ಪತ್ತೆ
8 ತಿಂಗಳ ಹಿಂದಿನ ದೃಶ್ಯಗಳನ್ನು ಬೇಕಂತಲೇ ಅಳಿಸಲಾಗಿದೆ ಎಂದು ಮಾಜಿ ಅಧಿಕಾರಿ ಮಹಿಪಾಲ್ ಸಿಂಗ್ ಹೇಳಿದ್ದಾರೆ. ಆದರೆ, ಅದು ತುಂಬಾ ಹಳೆಯದಾದ್ದರಿಂದ ಅದನ್ನು ಸಾಬೀತುಪಡಿಸುವುದು ಕಷ್ಟ. ಒಂದು ವೇಳೆ ಕಳೆದ ಒಂದೂವರೆ ತಿಂಗಳಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಅದು ಸಿಕ್ಕಿಬೀಳುವ ಸಾಧ್ಯತೆ ಇದೆ. ಇತ್ತ ಬ್ಯಾಂಕ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಯಾರೂ ಬೇಕಂತಲೇ ಡಿಲೀಟ್ ಮಾಡಿಲ್ಲ, ಸಿಸ್ಟಮ್ ನಿಯಮದಂತೆ ಅವು ತಾನಾಗಿಯೇ ಅಳಿಸಿಹೋಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇವಾಲಯಕ್ಕೆ ಬಂದ ಭಕ್ತರು ಎಷ್ಟು ಮತ್ತು ಅವರಿಂದ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಎಂಬ ದತ್ತಾಂಶವನ್ನು ಸರಿಯಾಗಿ ಪರಿಶೀಲಿಸಬೇಕಾಗಿದೆ. 2025ರ ಮಾರ್ಚ್‌ನಿಂದ 2026ರ ಮಾರ್ಚ್‌ವರೆಗಿನ ಒಂದು ವರ್ಷದಲ್ಲಿ ಬರೋಬ್ಬರಿ 16 ಕೋಟಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದಾರೆ. ಅವರಿಂದ ಬಂದಿರುವ ಕಾಣಿಕೆ 83 ಕೋಟಿ ರೂಪಾಯಿ. ಇದರ ಅರ್ಥ, ಬಂದ ಪ್ರತಿಯೊಬ್ಬ ಭಕ್ತನೂ ಸರಾಸರಿ 5 ರೂ. ಕೊಟ್ಟ ಹಾಗೆ ಆಗುತ್ತದೆ. ಪ್ರತಿದಿನ ಎಷ್ಟು ಜನ ಭಕ್ತರು ಬರುತ್ತಾರೆಂಬ ನಿಖರವಾದ ಲೆಕ್ಕ ದೇವಸ್ಥಾನದಲ್ಲಿ ಇರುತ್ತದೆ. ಹಾಗಾಗಿ ಟ್ರಸ್ಟ್‌ನವರು ಈ ಭಕ್ತರ ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಯಾವುದೇ ಮಾಹಿತಿ ಕೇಳಿದರೂ ಕೊಡಲು ಟ್ರಸ್ಟ್ ಸಿದ್ಧವಿದೆ. ಇನ್ನು, ಹಣ ಎಣಿಸುವಾಗ ಪಾಲಿಸಬೇಕಾದ ನಿಯಮಗಳಲ್ಲಿ ಕೇವಲ ಶೇ.10ರಷ್ಟು ನಿಯಮಗಳನ್ನು ಮಾತ್ರ ಬಳಸಲಾಗಿದೆ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ.ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಕೇಸ್ – ಎಸ್‌ಐಟಿಯಿಂದ 42 ಜನರ ವಿಚಾರಣೆ
