ತುಮಕೂರು: ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ ನಾಗೇಂದ್ರನ ಬಗ್ಗೆ ನೊಂದ ಯುವತಿ ರಮ್ಯಾ ಒಂದೊಂದೇ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಾಲ್ಕು ಪುಟಗಳ ದೂರು ಸಲ್ಲಿಸಿರುವ ಯುವತಿ, ಕಳೆದ ಆರು ವರ್ಷಗಳ ಪ್ರೀತಿ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರೀತಿ ಆರಂಭವಾದ ಎರಡು ವರ್ಷದ ಬಳಿಕ ನಾಗೇಂದ್ರನ ನಡವಳಿಕೆ ಬದಲಾಗಿತ್ತು. ಸಣ್ಣಪುಟ್ಟ ವಿಚಾರಕ್ಕೂ ಹೊಡೆಯುವುದು ಬೈಯುವುದು ಮಾಡುತಿದ್ದ. ಬಳಿಕ ಆತನ ನಡವಳಿಕೆಯಿಂದ ಬೇಸತ್ತು ದೂರಾಗಿದ್ದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಮೀರಿಸೋ ಲವ್ ಟ್ರ್ಯಾಜಿಡಿ – 6 ವರ್ಷಗಳ ಪ್ರೇಮ ಪ್ರಿಯಕರನ ಸಾವಿನಲ್ಲಿ ಅಂತ್ಯ!
ನಾನು ಮಾತನಾಡುವುದು ನಿಲ್ಲಿಸಿದರೂ ಪುನಃ ಹುಡುಕಿಕೊಂಡು ಬರುತ್ತಿದ್ದ. ನಾನು ಇರುವಲ್ಲಿ ಬಂದು ಗಲಾಟೆ ಮಾಡಿ ಹಲ್ಲೆ ಮಾಡುತಿದ್ದ. ಆಗ ನಾನೇ ಆತನ ಸಮಾಧಾನ ಮಾಡಿ ಕಳುಹಿಸುತ್ತಿದ್ದೆ. ಅದಾದ ಬಳಿಕ ನಾನೂ ಊರು ತೊರೆದು ಬಂದಿದ್ದೆ. ಆದರೂ ಬಿಡದೇ ಬಂದು ಕಿರುಕುಳ ಕೊಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಕೆ ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮ್ಯಾ ಮತ್ತು ಅಂಕೋಲಾ ಮೂಲದ ನಾಗೇಂದ್ರ ಪರಸ್ಪರ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮದುವೆಗೆ ರಮ್ಯಾ ಒಪ್ಪಿಗೆ ನೀಡದೆ ಸುಮ್ಮನಾಗಿದ್ದಳು ಎನ್ನಲಾಗಿದೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಮಧ್ಯೆ ಮನಸ್ತಾಪ ಉಂಟಾಗಿತ್ತು. ಜೊತೆಗೆ ನಾಗೇಂದ್ರ ಫೋನ್ ನಂಬರ್‌ನ ಕೂಡ ರಮ್ಯಾ ಬ್ಲಾಕ್ ಮಾಡಿದ್ದಳಂತೆ.
ಇದೇ ಕಾರಣಕ್ಕೆ ಆಸ್ಪತ್ರೆ ಬಳಿ ಬಂದು ರಮ್ಯಾಳನ್ನ ಬಲವಂತವಾಗಿ ಬಾಡಿಗೆ ಕಾರಿನಲ್ಲಿ ನಾಗೇಂದ್ರ ಅಪಹರಿಸಿದ್ದ. ಈ ಬಗ್ಗೆ ರಮ್ಯಾ ಸ್ನೇಹಿತೆಯಿಂದ ಕಿಡ್ನಾಪ್ ಕೇಸ್ ಸಹ ದಾಖಲಾಗಿತ್ತು. ಅಪಹರಣಕ್ಕೆ ಮೊದಲೇ ನಾಗೇಂದ್ರ ಬಾಂಬ್ ತಯಾರಿಸಿಕೊಂಡು ಬಂದಿದ್ದ. ಅಲ್ಲದೇ ನಾಗೇಂದ್ರ ರಸ್ತೆಯುದ್ಧಕ್ಕೂ ಪ್ರೇಯಸಿ ಜೊತೆ ಜಗಳವಾಡಿಕೊಂಡೇ ಬಂದಿದ್ದ.
ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ನಾಗೇಂದ್ರ, ತುಮಕೂರು-ಶಿರಾ ರಸ್ತೆಯಲ್ಲಿ ಕಾರು ಚಲಿಸುವಾಗ `ನಿನ್ನನ್ನು ಸಾಯಿಸಿ ನಾನು ಸಾಯುತ್ತೇನೆ’ ಎಂದು ಹೆದರಿಸಿ, ಚಾಕುವಿನಿಂದ ರಮ್ಯಾ ತಲೆ ಹಾಗೂ ತೋಳಿಗೆ ಇರಿದಿದ್ದ. ಇದರಿಂದ ಭಯಭೀತನಾದ ಕಾರು ಚಾಲಕ ವಾಹನ ನಿಲ್ಲಿಸಿ ಓಡಿಹೋಗಿದ್ದ. ಇದೇ ವೇಳೆ, ನಾಗೇಂದ್ರ ಬಾಂಬ್ ಸ್ಫೋಟಿಸಿಕೊಂಡಿದ್ದ. ಇದನ್ನೂ ಓದಿ: ಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
