ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ(Kempegowda Jayanti) ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ಭಾಷಣಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಕುಶಾಲ್ ಚೌಕ್ಸಿ ಅವರು, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಗದ್ದಲ ಮತ್ತು ಗಲಾಟೆಯಲ್ಲಿ ಸುಮಾರು 100 ರಿಂದ 150 ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಉಳಿದ ಎಲ್ಲ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಸೇರಿದಂತೆ ವಿವಿಧ ಜಾತಿ-ಸಮುದಾಯದ ಸಾರ್ವಜನಿಕರು ಭಾಗವಹಿಸಿದ್ದರು. ಆದರೆ, ಗದ್ದಲ ಎಬ್ಬಿಸಿದವರು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕರ್ತರೋ ಅಥವಾ ಸಾಮಾನ್ಯ ಜನರೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಯಾರೇ ಇದ್ದರೂ, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಇಲಾಖೆಯ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಎಸ್‌ಪಿ, ಕಾರ್ಯಕ್ರಮಕ್ಕೆ ಪೊಲೀಸ್ (Police) ಇಲಾಖೆಯಿಂದ ಸಮರ್ಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಪೊಲೀಸರ ಯಾವುದೇ ವೈಫಲ್ಯ ಇಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಶಾಸಕರಿಗೆ ಅವಮಾನ ಮಾಡುವ ಯತ್ನವಾಗಿದ್ದು, ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಖಬರ್ದಾರ್ ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರಲ್ಲ – ಪ್ರದೀಪ್ ಈಶ್ವರ್ ತಿರುಗೇಟು
ಶಾಸಕ ಪ್ರದೀಪ್ ಈಶ್ವರ್ ಅವರ ಮೇಲಿನ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ (DC) ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ದಾಳಿ ಮಾಡಿದವರನ್ನು ತಕ್ಷಣವೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ(ಜೂನ್27) ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ತೀವ್ರ ಹೈಡ್ರಾಮಾ ನಡೆದಿತ್ತು. ಭಾಷಣ ಮಾಡಲು ಮುಂದಾದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಕೆಲವರು ಅಡ್ಡಿಪಡಿಸಿ, ಗದ್ದಲ ಎಬ್ಬಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಪ್ರದೀಪ್ ಈಶ್ವರ್ ಕಾರಿನಲ್ಲಿ ಮಾತನಾಡುತ್ತಿದ್ದಾಗ ಚಪ್ಪಲಿ ಎಸೆಯುವ ಮೂಲಕ ಶಾಸಕರಿಗೆ ತೀವ್ರ ಅವಮಾನ ಮಾಡುವ ಯತ್ನ ನಡೆದಿತ್ತು. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
