– ನನ್ನ ಗುತ್ತಿಗೆ ಕಂಪನಿ ಬಂದ್ ಆಗಿದೆ, 700 ರಿಂದ 750 ಕೋಟಿ ಬಿಲ್ ಹಿಡ್ಕೊಂಡು ಕೂತಿದ್ದಾರೆ
– ನನ್ನಿಂದ 172 ಕೋಟಿ ರಿಕವರಿ ಮಾಡಿದ್ದಾರೆ, ಇದಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕಬೇಕಾ?
ರಾಯಚೂರು: ನಾನು ಅಡ್ಡ ಮತದಾನ(Cross Voting) ಮಾಡಿದ ಬಗ್ಗೆ ಏನಾದರೂ ಒಂದೇ ಒಂದು ಸಾಕ್ಷ್ಯ ತೋರಿಸಿದ್ರೆ ಇವತ್ತೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಬಿಜೆಪಿ(BJP) ಕಚೇರಿಯಲ್ಲಿ ಕಸ ಹೊಡೆಯುತ್ತಾ, ಗೇಟ್ ಕಾಯುತ್ತಾ ಇರ್ತೀನಿ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ವಜ್ಜಲ್, ಆಣೆ ಪ್ರಮಾಣದಲ್ಲಿ ಪಕ್ಷದವರು ಏನೇ ತೀರ್ಮಾನ ತೆಗೆದುಕೊಂಡರೂ ನಾವು ರೆಡಿ ಇದ್ದೇವೆ. ಮೈಸೂರಿನ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಪ್ರಕಟವಾಗಿದೆ ಅನ್ನೋದನ್ನು ಕೇಳಿದ್ದೀನಿ ಎಂದರು.
ನಾನು ಬಿಜೆಪಿ ಶಾಸಕ ಅಂತ ಇವತ್ತಿಗೂ ನನ್ನನ್ನು ಅವರ ಆಫೀಸ್‌ಗೆ ಬರಲು ಬಿಟ್ಟಿಲ್ಲ. ಕ್ಷೇತ್ರಕ್ಕೆ ಅನುದಾನ ಕೇಳಿದಾಗಲೂ ಬಿಜೆಪಿ ಶಾಸಕನಿಗೆ ಯಾಕೆ ಕೊಡಬೇಕು ಅಂತ ಮಾತನಾಡಿದ್ದಾರೆ. 40 ವರ್ಷದಿಂದ ಗುತ್ತೆದಾರಿಕೆ ಮಾಡಿಕೊಂಡು ಬಂದಿದ್ದೇನೆ. ಈ ಸರ್ಕಾರ ಬಂದ ಮೇಲೆ ಮೂರು ವರ್ಷದಿಂದ ನನ್ನ ಕಂಪನಿ ಕಚೇರಿ ಬಂದ್ ಮಾಡಿದ್ದೀನಿ. ನನ್ನ 700 ರಿಂದ 750 ಕೋಟಿ ಬಿಲ್ ಹಿಡ್ಕೊಂಡು ಕೂತಿದ್ದಾರೆ. ಇವತ್ತಿಗೂ ಒಂದು ರೂಪಾಯಿ ಪೇಮೆಂಟ್ ಕೊಟ್ಟಿಲ್ಲ. ಇವರಿಗೆ ಓಟ್ ಹಾಕಬೇಕಾ? 172 ಕೋಟಿ ರಿಕವರಿ ಮಾಡಿದ್ದಾರೆ, ಅದಕ್ಕೆ ಇವರಿಗೆ ಓಟ್ ಹಾಕಬೇಕಾ? ಎಂದು ಪ್ರಶ್ನಿಸಿದ್ದಾರೆ.
ನಾನು ಬಿಜೆಪಿ ಶಾಸಕ. ನನ್ನಲ್ಲಿರುವುದು ಪಕ್ಷದ ಮತ್ತು ದೇಶದ ಅಭಿಮಾನ. ಪಕ್ಷ ನನಗೆ ಏನು ಸ್ಥಾನಮಾನ ಕೊಟ್ಟಿದೆಯೋ ಆ ಗೌರವದಿಂದ ನಾನು ತಾಯಿ ಸ್ಥಾನದಲ್ಲಿ ಪಕ್ಷವನ್ನು ನೋಡಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್‌ಗೆ ಅಡ್ಡ ಮತದಾನ ಹಾಕುವ ಅವಶ್ಯಕತೆ ನನಗೆ ಬರಲ್ಲ. ಅದು ಯಾವತ್ತಿಗೂ ನಮಗೆ ವೈರಿ. ದುಡ್ಡಿನ ಅವಶ್ಯಕತೆಯೂ ನನಗೆ ಇಲ್ಲ. ಯಾರ ಹತ್ತಿರವೂ ಕೇಳಲ್ಲ. ಭಗವಂತ ನನಗೆ ಎಲ್ಲ ಕೊಟ್ಟಿದ್ದಾನೆ ಎಂದು ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಹೇಳಿದ್ದಾರೆ.ಇದನ್ನೂ ಓದಿ: ಬೆಂಗಳೂರಿನ ಟನಲ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ
ಇನ್ನೂ ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ ಖರ್ಗೆ ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದ ವಜ್ಜಲ್, ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿಕೆಗಳು ಸಮಂಜಸವಲ್ಲ. ಏನೋ ಅವರ ಪಕ್ಷದಲ್ಲಿ ಹೆಸರು ಗಳಿಸಬೇಕು, ಹೈಲೈಟ್ ಆಗಬೇಕು ಅನ್ನೋ ಉದ್ದೇಶದಿಂದ ಮಾತನಾಡುತ್ತಿದ್ದಾರೆ ಎಂದರು.
ಆರ್‌ಎಸ್‌ಎಸ್‌ಗೆ ನೂರು ವರ್ಷದ ಇತಿಹಾಸವಿದೆ. ಖರ್ಗೆ ಸಾಹೇಬರ ವಯಸ್ಸು 40-45 ಇರಬಹುದು. ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ಇವರಿಗೆ ಯಾರಿಗೂ ಹಕ್ಕಿಲ್ಲ ಎಂದು ಮಾನಪ್ಪ ವಜ್ಜಲ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು: ಜಿ.ಟಿ.ದೇವೇಗೌಡ
