– ಚೀನಾ ಇವಿ ಕಂಪನಿಗಳಿಂದ ಭಾರೀ ಸ್ಪರ್ಧೆ
– ಜುಲೈ 9 ರಂದು ಅಂತಿಮ ನಿರ್ಧಾರ
ಬರ್ಲಿನ್: ಜರ್ಮನಿಯ ಪ್ರಸಿದ್ಧ ಕಾರು ಉತ್ಪಾದನಾ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ (Volkswagen) ತನ್ನ 89 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪುನರ್ರಚನೆಗೆ (Restructuring) ಪ್ರಕ್ರಿಯೆಗೆ ಮುಂದಾಗಿದೆ. ಇದರ ಭಾಗವಾಗಿ ಜಾಗತಿಕವಾಗಿ ಸುಮಾರು 1 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಲು ಮತ್ತು ಜರ್ಮನಿಯ ನಾಲ್ಕು ಪ್ರಮುಖ ಫ್ಯಾಕ್ಟರಿಗಳನ್ನು ಮುಚ್ಚಲು ಗಂಭೀರ ಚಿಂತನೆ ನಡೆಸುತ್ತಿದೆ.
ಜರ್ಮನಿಯ ಹ್ಯಾನೋವರ್ (Hanover), ಜ್ವಿಕ್ಕಾವ್ (Zwickau), ಎಮ್ಡೆನ್ (Emden) ಮತ್ತು ಆಡಿಯ (Audi) ನೆಕರ್ಸಲ್ಮ್ ಪ್ಲಾಂಟ್‌ಗಳನ್ನು ಮುಚ್ಚಲು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ನೇರವಾಗಿ 45 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಅಪಾಯಕ್ಕೆ ಸಿಲುಕಲಿವೆ.
ಕಂಪನಿಯು ಈಗಾಗಲೇ 2024 ರ ಕೊನೆಯಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ 50 ಸಾವಿರ ಉದ್ಯೋಗ ಕಡಿತಕ್ಕೆ ಒಪ್ಪಿಕೊಂಡಿತ್ತು. ಈಗ ಪ್ರಸ್ತಾಪಿಸಲಾಗಿರುವ ಹೊಸ ಪ್ಲಾನ್ ಕೂಡ ಜಾರಿಯಾದರೆ ಒಟ್ಟು ಉದ್ಯೋಗ ಕಡಿತದ ಸಂಖ್ಯೆ 1 ಲಕ್ಷಕ್ಕೆ ತಲುಪಲಿದೆ.
ಈ ಪರಿಸ್ಥಿತಿಗೆ ಕಾರಣಗಳೇನು?
ಚೀನಾ ಇವಿ ಕಂಪನಿಗಳ ಪೈಪೋಟಿ:
ಚೀನಾದ ಬಿವೈಡಿ (BYD) ನಂತಹ ಎಲೆಕ್ಟ್ರಿಕ್ ವಾಹನ (EV) ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದು, ಫೋಕ್ಸ್‌ವ್ಯಾಗನ್‌ನ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳುತ್ತಿವೆ.

ಕುಸಿಯುತ್ತಿರುವ ಮಾರಾಟ:
ಯೂರೋಪ್‌ನಲ್ಲಿ ವಾಹನಗಳ ಬೇಡಿಕೆ ಕಡಿಮೆಯಾಗಿರುವುದು ಮತ್ತು ಅಮೆರಿಕ ವಿಧಿಸುತ್ತಿರುವ ಕಠಿಣ ಸುಂಕಗಳು (Tariffs) ಕಂಪನಿಯ ಆದಾಯದ ಮೇಲೆ ಭಾರೀ ಹೊಡೆತ ನೀಡಿದೆ.
ಕಂಪನಿಯ ವಿಭಜನೆ
ವೆಚ್ಚ ಕಡಿತದ ಭಾಗವಾಗಿ ಸಿಇಒ ಆಲಿವರ್ ಬ್ಲೂಮ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (CFO) ಆರ್ನೋ ಆಂಟ್ಲಿಟ್ಜ್ ಅವರು ಕಂಪನಿಯನ್ನು ಸಂಪೂರ್ಣವಾಗಿ ಪುನರ್ರಚಿಸಲು ಬಯಸಿದ್ದಾರೆ. ಈ ಯೋಜನೆಯ ಪ್ರಕಾರ, ಫೋಕ್ಸ್‌ವ್ಯಾಗನ್‌ನ ಮುಖ್ಯ ಕಾರ್ ಬ್ರ್ಯಾಂಡ್ (Core VW brand) ಮತ್ತು ಅದರ ಬಿಡಿಭಾಗಗಳ ತಯಾರಿಕಾ ವಿಭಾಗವನ್ನು ಪ್ರತ್ಯೇಕ ಸ್ವತಂತ್ರ ಘಟಕಗಳಾಗಿ (Separate entities) ವಿಭಜಿಸಲು ನಿರ್ಧರಿಸಲಾಗಿದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕಂಪನಿಯು ತನ್ನ ಯೋಜಿತ ಬಂಡವಾಳ ಹೂಡಿಕೆಯನ್ನು ಸುಮಾರು 15% ರಷ್ಟು ಕಡಿಮೆ ಮಾಡಿ, ಬಜೆಟ್ ಅನ್ನು 130 ಬಿಲಿಯನ್ ಯುರೋಗಳಿಗೆ (ಸುಮಾರು13.96 ಲಕ್ಷ ಕೋಟಿ ರೂ.) ಸೀಮಿತಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ವಾಹನ ಪ್ರಿಯರಿಗೆ ಶಾಕ್| ಮಾರುತಿ ಸುಜುಕಿ ಕಾರುಗಳ ಬೆಲೆ 30 ಸಾವಿರ ರೂ.ವರೆಗೆ ಏರಿಕೆ!
ಕಂಪನಿಯ ಸಿಇಒ ಆಲಿವರ್ ಬ್ಲೂಮ್ (Oliver Blume) ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರಾದರೂ, ಇದಕ್ಕೆ ಜರ್ಮನಿಯ ಪ್ರಭಾವಿ ಕಾರ್ಮಿಕ ಸಂಘಟನೆಗಳು (IG Metall union) ಮತ್ತು ಕಂಪನಿಯ ಎರಡನೇ ಅತಿ ದೊಡ್ಡ ಷೇರುದಾರರಾದ ಲೋವರ್ ಸ್ಯಾಕ್ಸೋನಿ (Lower Saxony) ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಪ್ಲಾಂಟ್ ಮುಚ್ಚಲು ಬಿಡುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ಹಳೆಯ ಒಪ್ಪಂದಕ್ಕೆ ಧಕ್ಕೆ
ಕಂಪನಿಯು ಈಗಾಗಲೇ 50 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವ ಪ್ರಕ್ರಿಯೆಯಲ್ಲಿದೆ. ಅದರ ಜೊತೆಗೆ ಈ ಹೊಸ 1 ಲಕ್ಷ ಉದ್ಯೋಗ ಕಡಿತದ ಪ್ರಸ್ತಾಪ ಬಂದಿದೆ. ಕಾರ್ಮಿಕ ಸಂಘಟನೆಗಳೊಂದಿಗೆ 2024 ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಈ ದಶಕದ ಅಂತ್ಯದವರೆಗೆ (2030 ರವರೆಗೆ) ಜರ್ಮನಿಯಲ್ಲಿ ಯಾವುದೇ ಪ್ಲಾಂಟ್ ಮುಚ್ಚುವಂತಿರಲಿಲ್ಲ. ಆದರೂ ಪರಿಸ್ಥಿತಿ ಹದಗೆಟ್ಟಿರುವುದರಿಂದ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಆಪಲ್ ಉತ್ಪನ್ನಗಳ ಬೆಲೆ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?
ಮುಂದಿನ ನಡೆ ಏನು?
ಈ ಯೋಜನೆಗಳನ್ನು ಒಳಗೊಂಡ ‘ಗ್ರೂಪ್ ಟಾರ್ಗೆಟ್ ಪಿಕ್ಚರ್ 2030’ ರ ಸಂಪೂರ್ಣ ಬ್ಲೂಪ್ರಿಂಟ್ ಅನ್ನು ಜುಲೈ 9 ರಂದು ನಡೆಯಲಿರುವ ಆಡಳಿತ ಮಂಡಳಿ (Supervisory Board) ಸಭೆಯಲ್ಲಿ ಅಧಿಕೃತವಾಗಿ ಮಂಡಿಸಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಜಿಎಂನಂತೆ ಸಂಕಷ್ಟ:
ಪ್ರಸ್ತುತ ಫೋಕ್ಸ್‌ವ್ಯಾಗನ್ (Volkswagen) ಕಂಪನಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಎಷ್ಟು ದೊಡ್ಡದಾಗಿದೆ ಎಂದರೆ ಇದನ್ನು ಈ ಹಿಂದೆ ಅಮೆರಿಕದ ದೈತ್ಯ ಆಟೋಮೊಬೈಲ್ ಕಂಪನಿ ಜನರಲ್ ಮೋಟಾರ್ಸ್ (GM) ಎದುರಿಸಿದ್ದ ಐತಿಹಾಸಿಕ ಸಂಕಷ್ಟಕ್ಕೆ ಹೋಲಿಸಲಾಗುತ್ತಿದೆ. GM ಕಂಪನಿಯು 1990ರ ದಶಕದಲ್ಲಿ 74,000 ಉದ್ಯೋಗಿಗಳನ್ನು ತೆಗೆದುಹಾಕಿ 21 ಫ್ಯಾಕ್ಟರಿಗಳನ್ನು ಮುಚ್ಚಿತ್ತು ಮತ್ತು 2009ರಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿ ತೀವ್ರ ಬಿಕ್ಕಟ್ಟು ಎದುರಿಸಿತ್ತು. ಈಗ ಫೋಕ್ಸ್‌ವ್ಯಾಗನ್‌ನಲ್ಲಿ ಆಗುತ್ತಿರುವ ಬದಲಾವಣೆಗಳು ಕೂಡ ಅಷ್ಟೇ ಆತಂಕಕಾರಿಯಾಗಿವೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
