ನವದೆಹಲಿ: ಭಾರತದ ಪ್ರಮುಖ ಮತ್ತು ಅತ್ಯಂತ ಜನಪ್ರಿಯ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ (Maruti Suzuki) ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ತನ್ನೆಲ್ಲಾ ಕಾರುಗಳ ಮಾದರಿಗಳ ಬೆಲೆಯನ್ನು 30 ಸಾವಿರ ರೂ. ವರೆಗೆ ಹೆಚ್ಚಿಸುವುದಾಗಿ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿದೆ.
ವಾಹನ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾರುತಿ ಸುಜುಕಿ ಸಂಸ್ಥೆಯು ಮುಂಬೈನ ರಾಷ್ಟ್ರೀಯ ಷೇರು ಮಾರುಕಟ್ಟೆಗೆ (NSE) ಮಾಹಿತಿ ನೀಡಿದೆ.
ಈ ದರ ಏರಿಕೆಯು ಎಲ್ಲಾ ಕಾರುಗಳಿಗೂ ಒಂದೇ ಸಮನಾಗಿ ಇರುವುದಿಲ್ಲ. ಕಾರಿನ ಮಾಡೆಲ್ ಮತ್ತು ಆವೃತ್ತಿಗೆ (Variant) ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸವಿರಲಿದೆ. ಮಾರುತಿಯ ಅರೆನಾ (Arena) ಮತ್ತು ನೆಕ್ಸಾ (Nexa) ಶ್ರೇಣಿಯ ಕಾರುಗಳ ಎಕ್ಸ್-ಶೋರೂಂ ಬೆಲೆಯಲ್ಲಿ ಹೆಚ್ಚಳ ಕಂಡುಬರಲಿದೆ.
ಮಧ್ಯಮ ವರ್ಗದವರ ನೆಚ್ಚಿನ ಕಾರುಗಳಾದ ಆಲ್ಟೊ, ಸ್ವಿಫ್ಟ್, ವ್ಯಾಗನ್ಆರ್, ಬ್ರೆಝಾ ಮತ್ತು ಪ್ರೀಮಿಯಂ ಕಾರಾದ ಗ್ರಾಂಡ್ ವಿಟಾರಾ ಸೇರಿದಂತೆ ಬಹುತೇಕ ಎಲ್ಲಾ ಕಾರುಗಳ ಬೆಲೆಯೂ ದುಬಾರಿಯಾಗಲಿದೆ. ಇದನ್ನೂ ಓದಿ: ಹ್ಯಾಂಡ್ಸ್ ಫ್ರೀ ರೈಡಿಂಗ್ ನಿಯಂತ್ರಣಕ್ಕೆ ಸರ್ಕಾರ ಹೊಸ ಪ್ಲ್ಯಾನ್ – ದ್ವಿಚಕ್ರ ವಾಹನಗಳಿಗೆ ಬರುತ್ತೆ 3 ಲೇಯರ್ ಸೇಫ್ಟಿ ಸಿಸ್ಟಮ್

ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಸಂಸ್ಥೆಗಳು ಸಹ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿದ್ದವು. ಈಗ ಮಾರುತಿ ಸುಜುಕಿ ಕೂಡ ಅದೇ ಹಾದಿ ಹಿಡಿದಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿ ವಾಹನ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಾಗುವ ಸ್ಟೀಲ್, ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್‌ನಂತಹ ಕಚ್ಚಾ ವಸ್ತುಗಳ ಬೆಲೆಗಳು ತೀವ್ರವಾಗಿ ಹೆಚ್ಚಾಗಿವೆ.
ಪಶ್ಚಿಮ ಏಷ್ಯಾದಲ್ಲಿ, ವಿಶೇಷವಾಗಿ ಇರಾನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕ ಹಡಗು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು (Logistics Costs) ಗಣನೀಯವಾಗಿ ಏರಿಕೆಯಾಗಿವೆ.
ಕಳೆದ ಕೆಲವು ತಿಂಗಳುಗಳಿಂದ ಕಂಪನಿಯು ತನ್ನ ಆಂತರಿಕ ವೆಚ್ಚ ಕಡಿತ ಕ್ರಮಗಳ ಮೂಲಕ ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸದೆ ತಾನೇ ಭರಿಸುತ್ತಿತ್ತು. ಆದರೆ ಇನ್ನು ಮುಂದೆ ಅದನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಾಗದ ಕಾರಣ, ಅನಿವಾರ್ಯವಾಗಿ ಅದರ ಒಂದು ಭಾಗವನ್ನು ಗ್ರಾಹಕರ ಮೇಲೆ ಹಾಕಲಾಗುತ್ತಿದೆ.

