– ಕೈಬಿಟ್ಟು ಓಡಿಸಿದ್ರೆ ತಂತಾನೆ ಸ್ಲೋ ಆಗುತ್ತೆ ಟು-ವ್ಹೀಲರ್!
ನವದೆಹಲಿ: ಅಪಾಯಕಾರಿ ಹ್ಯಾಂಡ್ಸ್ ಫ್ರೀ ರೈಡಿಂಗ್ (Hands Off Riding) ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಸುಧಾರಿತ ತಂತ್ರಜ್ಞಾನದೊಂದಿಗೆ ದ್ವಿಚಕ್ರ ವಾಹನಗಳಿಗೆ 3 ಲೇಯರ್ ಸೇಫ್ಟಿ ಸಿಸ್ಟಮ್ ಅಳವಡಿಕೆಗೆ ಯೋಜಿಸಲಾಗಿದೆ.
ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ದೇಶದಲ್ಲಿ ದ್ವಿಚಕ್ರ ವಾಹನಗಳಿಗಾಗಿ ಮೂರು-ಪದರದ ‘ಹ್ಯಾಂಡ್ಸ್-ಫ್ರೀ’ ಸುರಕ್ಷತಾ ಸಿಸ್ಟಮ್ (Hands Free Safety System) ಅಳವಡಿಸಲು ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ಚಕ್ರ ಕಳಚುವ ಭೀತಿ-173 ಸೈಬರ್ ಟ್ರಕ್ ಹಿಂಪಡೆದ ಟೆಸ್ಲಾ
ದೇಶದಲ್ಲಿ ಯುವಕರು ಬೈಕ್ ಸ್ಟಂಟ್ ಮಾಡೋದೇ ಹೆಚ್ಚು. ಹ್ಯಾಂಡಲ್‌ಬಾರ್‌ಗಳನ್ನು ಕೈಯಲ್ಲಿ ಹಿಡಿದುಕೊಳ್ಳದೇ ಅತಿ ವೇಗವಾಗಿ ಬೈಕ್‌ಗಳನ್ನು ಓಡಿಸುತ್ತಾರೆ. ಅಪಾಯಕಾರಿ ಸ್ಟಂಟ್ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇಂತಹ ಹುಚ್ಚಾಟಗಳಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ವಾಹನ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆಗೆ ಹೊಸ ಕ್ರಮಕ್ಕೆ ಮುಂದಾಗಿದೆ.
2024 ರಲ್ಲಿ ಭಾರತದಾದ್ಯಂತ ಸುಮಾರು 4,68,000 ರಸ್ತೆ ಅಪಘಾತಗಳು ವರದಿಯಾಗಿವೆ. ಅಪಘಾತಗಳಲ್ಲಿ 1,75,142 ಜನರು ಸಾವನ್ನಪ್ಪಿದ್ದು, 4,48,365 ಜನರು ಗಾಯಗೊಂಡಿದ್ದಾರೆ. ಈ ಅಪಘಾತಗಳಲ್ಲಿ ಹೆಚ್ಚಿನವು ದ್ವಿಚಕ್ರ ವಾಹನದ್ದಾಗಿವೆ.
ಹೊಸ ಸುರಕ್ಷತಾ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?
ದ್ವಿಚಕ್ರ ವಾಹನಗಳು ಈ 3 ಲೇಯರ್ ಸೇಫ್ಟಿ ಸಿಸ್ಟಮ್ ಅನುಸರಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಸವಾರನ ಎರಡೂ ಕೈಗಳು ಹ್ಯಾಂಡಲ್‌ಬಾರ್‌ಗಳ ಮೇಲೆ ಇಲ್ಲದಿದ್ದರೆ ಮೊದಲ ಲೇಯರ್ ಸಿಸ್ಟಮ್ ತಂತಾನೆ ‘ಇಗ್ಲಿಷನ್’ (ದಹನ ಪ್ರಕ್ರಿಯೆ) ಅನ್ನು ತಡೆಯುತ್ತದೆ. 2ನೇ ಲೇಯರ್, ಆಡಿಯೋ ಮತ್ತು ದೃಶ್ಯ ಸಂದೇಶದ (ಕೇವಲ 3 ಸೆಕೆಂಡ್‌ಗಳಲ್ಲಿ) ಮೂಲಕ ಎಚ್ಚರಿಕೆ ನೀಡುತ್ತದೆ. 3ನೇ ಲೇಯರ್ ವಾಹನವು ನಿಧಾನಗತಿಯಲ್ಲಿ ಚಲಿಸುವಂತೆ ನಿಯಂತ್ರಿಸುತ್ತದೆ. ಹ್ಯಾಂಡಲ್‌ಬಾರ್‌ಗಳಿಂದ ಕೈಗಳನ್ನು ತೆಗೆದ 8 ಸೆಕೆಂಡ್‌ಗಳಲ್ಲಿ ಕೋಸ್ಟ್-ಡೌನ್ ಮೋಡ್ ಸಕ್ರಿಯಗೊಂಡು ವಾಹನ ಸ್ವಯಂಚಾಲಿತವಾಗಿ ನಿಧಾನಗೊಳ್ಳುತ್ತದೆ. ಇದನ್ನೂ ಓದಿ: 15 ವರ್ಷದ ಬಳಿಕ ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – ಭಾರತಕ್ಕೆ ಏನು ಲಾಭ?
ವಾಹನಗಳ ಬೆಲೆ ಹೆಚ್ಚಾಗುತ್ತಾ?
ಪ್ರಸ್ತಾವಿತ ಸುರಕ್ಷತಾ ಮಾನದಂಡಗಳು ಭಾರತೀಯ ಮಾರುಕಟ್ಟೆಯಲ್ಲಿ ಮುಂಬರುವ ದ್ವಿಚಕ್ರ ವಾಹನಗಳ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹ್ಯಾಂಡಲ್‌ಬಾರ್‌ಗಳಲ್ಲಿ ಅಳವಡಿಸಬೇಕಾದ ಸಂವೇದಕಗಳ ಪ್ರತಿ-ಯೂನಿಟ್ ಸೆನ್ಸರ್ ವೆಚ್ಚವು 800 ರಿಂದ 1,000 ರೂ. ವರೆಗೆ ಇರುತ್ತದೆ. ಗ್ರಾಹಕರು ಈ ಸಿಸ್ಟಮ್‌ಗಾಗಿ ಹೆಚ್ಚುವರಿಯಾಗಿ 1,600-2,000 ರೂ. ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿನ ಎಲ್ಲಾ ದ್ವಿಚಕ್ರ ವಾಹನಗಳು ಈಗಾಗಲೇ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕವನ್ನು (ECU) ಹೊಂದಿವೆ. ಆದಾಗ್ಯೂ, ಹ್ಯಾಂಡಲ್‌ಬಾರ್‌ಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲು ಮತ್ತು ಮಾನದಂಡಗಳನ್ನು ಪೂರೈಸಲು ECU ಅನ್ನು ಜೋಡಿಸುವುದು ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ.

