– 18ನೇ ಸೀಸನ್ನ ಮೊದಲ ಕೋಟ್ಯಧಿಪತಿ
ಮುಂಬೈ: ಜಲಗಾಂವ್ನಿಂದ ಹಾಟ್ಸೀಟ್ವರೆಗಿನ ಸ್ಫೂರ್ತಿದಾಯಕ ಪಯಣದ ನಂತರ, ಭೂಷಣ್ ಠಾಕರೆ (Bhushan Thakare) ಅವರು `ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಸೀಸನ್ 18ರ ಮೊದಲ ಕೋಟ್ಯಧಿಪತಿಯಾಗಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಈ ಸೀಸನ್ನ ಮೊದಲ ಕೋಟ್ಯಧಿಪತಿಯಾಗಿ ಹೊರಹೊಮ್ಮಿರುವ ಭೂಷಣ್ ಠಾಕರೆ ಅವರು ನ.23ರಂದು ಮತ್ತೆ ಹಾಟ್ಸೀಟ್ನಲ್ಲಿ ಕುಳಿತು ಶೋನ ಅತ್ಯುನ್ನತ ಬಹುಮಾನವಾದ 7 ಕೋಟಿ ರೂ. ಪ್ರಶ್ನೆಯನ್ನು ಎದುರಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ
ಜಲಗಾಂವ್ ಮೂಲದ ಭೂಷಣ್ ಅವರು ಕೇವಲ 24 ರೂ.ಗಳೊಂದಿಗೆ ಮುಂಬೈಗೆ ಬಂದಿದ್ದರು. ಇದೀಗ 1 ಕೋಟಿ ರೂ. ಗೆದ್ದು ಕೋಟ್ಯಧಿಪತಿಯಾಗಿದ್ದು, ಈಗ 7 ಕೋಟಿ ರೂ. ಪ್ರಶ್ನೆಗೆ ಸಜ್ಜಾಗಿದ್ದಾರೆ.
ನಿರೂಪಕ ಅಮಿತಾಬ್ ಬಚ್ಚನ್ ಅವರೊಂದಿಗೆ ಶೋ ವೇಳೆ, ಭೂಷಣ್ ತಾವು ಕಳೆದ ಒಂದೂವರೆ ವರ್ಷದಿಂದ ಮನೆಯಿಂದ ದೂರವಿರುವ ಬಗ್ಗೆ ಮಾತನಾಡಿದರು. ಆರ್ಥಿಕ ಸಂಕಷ್ಟದ ನಡುವೆಯೂ ತಮಗೆ ಶಿಕ್ಷಣ ಕೊಡಿಸಲು ಪೋಷಕರು ಪಟ್ಟ ಕಷ್ಟವನ್ನು ಸ್ಮರಿಸಿದರು.ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ನಟಿ ರಮ್ಯಾ
ತಮ್ಮ ಕುಟುಂಬದ ಬಗ್ಗೆ ಮನಬಿಚ್ಚಿ ಮಾತನಾಡಿದ ಭೂಷಣ್, ಸರ್, ನಾನು ಕಳೆದ ಒಂದೂವರೆ ವರ್ಷದಿಂದ ಮನೆಗೆ ಹೋಗಿಲ್ಲ ಮತ್ತು ನನಗೀಗ 28 ವರ್ಷ. ನನ್ನ ತಂದೆ-ತಾಯಿ ಬಹಳ ಕಷ್ಟಪಟ್ಟು ನನ್ನನ್ನು ಬೆಳೆಸಿದ್ದಾರೆ. ತಂದೆ ಕೂಲಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿಗೆ ಆರೋಗ್ಯ ಸರಿ ಇರುವುದಿಲ್ಲ, ಅವರಿಗೆ ಸಾಕಷ್ಟು ಆಪರೇಷನ್ಗಳಾಗಿವೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರೂ, ಆ ಹಣದಿಂದಲೇ ತಾಯಿಯ ಆರೈಕೆ ಮಾಡಿದರು ಮತ್ತು ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಆದರೆ ನಾನು ಇನ್ನೂ ಜೀವನದಲ್ಲಿ ನೆಲೆ ಕಂಡುಕೊಂಡಿಲ್ಲ ಎಂದು ನನಗೆ ಅನಿಸತೊಡಗಿತು. ಹೀಗಾಗಿ, ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಸಾಧಿಸಿದ ನಂತರವೇ ಮನೆಗೆ ವಾಪಸ್ ಬರುತ್ತೇನೆ ಎಂದು ತಂದೆ-ತಾಯಿಗೆ ಹೇಳಿ ಬಂದಿದ್ದೆ ಎಂದು ತಿಳಿಸಿದರು.
ತಮ್ಮನ್ನು ಕೂಲಿ ಕೆಲಸದಿಂದ ದೂರವಿಟ್ಟು, ವಿದ್ಯಾಭ್ಯಾಸದತ್ತ ಗಮನಹರಿಸುವಂತೆ ತಂದೆ ನೀಡಿದ ಪ್ರೋತ್ಸಾಹದ ಬಗ್ಗೆಯೂ ಭೂಷಣ್ ಮಾತನಾಡಿದರು. ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದರೂ, ಮಗ ಶಿಕ್ಷಣ ಪೂರ್ಣಗೊಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ಅವರ ತಂದೆಯ ಆಸೆಯಾಗಿತ್ತು ಎಂದರು.
ಮುಂಬೈ ತಲುಪಿದ್ದ ಭೂಷಣ್, ಇಂದು ಕೆಬಿಸಿ ಸೀಸನ್ 18ರ ಅತಿ ದೊಡ್ಡ ಪ್ರಶ್ನೆಯನ್ನು ಎದುರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಈಗ ಅವರ ಮುಂದೆ ಇರುವುದು ಶೋನ ಅತ್ಯುನ್ನತ ಬಹುಮಾನವಾದ 7 ಕೋಟಿ ರೂ. ಪ್ರಶ್ನೆ. ಈ ಪ್ರಶ್ನೆಯನ್ನು ಗೆಲ್ಲುವುದು ಎಂದರೆ, ಅವರು ತಮ್ಮ ಪೋಷಕರಿಗೆ ನೀಡಿದ ಭರವಸೆಯನ್ನು ಈಡೇರಿಸಿದಂತೆ ಮತ್ತು ಅವರ ತ್ಯಾಗಗಳಿಗೆ ಸಾರ್ಥಕತೆ ತಂದಂತೆ. ಭೂಷಣ್ ಅವರು ಅಂತಿಮ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಪ್ರೀತಿಯ ಅಣ್ಣ… ನಿಮ್ಮ ಅಕ್ಕ-ತಂಗಿಯರು ಕಷ್ಟದಲ್ಲಿದ್ದಾರೆ ಸಮಸ್ಯೆ ಬಗೆಹರಿಸಿ – ಸಿಎಂ ಟ್ವೀಟ್ ಶೈಲಿಯಲ್ಲೇ ʻಆಶಾʼಗಳ ಮನವಿ
