ಮಂಡ್ಯ: ಕಾವೇರಿ ನದಿ ನೀರು (Cauvery Water Dispute) ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಂದು ಮಹತ್ವದ ದಿನ ಎದುರಾಗಿದೆ. ತಮಿಳುನಾಡಿಗೆ (Tamil Nadu) ಮತ್ತೆ ನೀರು ಹರಿಸಬೇಕೇ ಅಥವಾ ಬೇಡವೇ ಎಂಬ ಗಂಭೀರ ಪ್ರಶ್ನೆಗೆ ಇಂದು ದೆಹಲಿಯಲ್ಲಿ (Delhi) ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ CWMA ಸಭೆಯಲ್ಲಿ ಸ್ಪಷ್ಟ ತೀರ್ಮಾನ ಹೊರಬೀಳಲಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಇತ್ತೀಚೆಗೆ ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಕರೆಯಲಾಗಿರುವ CWMA ಸಭೆ ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಮತ್ತೆ ಭಾರತಕ್ಕೆ ಟ್ರಂಪ್ ಶಾಕ್?; 16 ದೇಶಗಳ ಮೇಲೆ ಹೊಸ ಸುಂಕ ಹೇರಲು ಸಿದ್ಧತೆ
ಸಭೆಯಲ್ಲಿ ವಾದ-ಪ್ರತಿವಾದದ ಕದನ:
ದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ CWRC ನೀಡಿರುವ ಶಿಫಾರಸಿನ ಕುರಿತು ಕೂಲಂಕುಷ ಪರಾಮರ್ಶೆ ನಡೆಯಲಿದೆ. ಮೊದಲಿಗೆ ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ತಮ್ಮ ವಸ್ತುಸ್ಥಿತಿಯ ವಾದವನ್ನು ಪ್ರಾಧಿಕಾರದ ಮುಂದೆ ಮಂಡಿಸಲಿದ್ದಾರೆ. ಇದನ್ನೂ ಓದಿ: ಇಸ್ರೇಲ್ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಗೂಢ ಸಾವು – ಕೊಲೆ ಶಂಕೆ
ಕರ್ನಾಟಕದ ಪ್ರಮುಖ ವಾದ: ರಾಜ್ಯದಲ್ಲಿ ಮಳೆಯ ಕೊರತೆ, ಜಲಾಶಯಗಳಲ್ಲಿನ ನೀರಿನ ಕುಸಿತ ಹಾಗೂ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪಟ್ಟಣಗಳಿಗೆ ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಗತ್ಯತೆಯನ್ನು ಅಧಿಕಾರಿಗಳು ಬಿಂಬಿಸಲಿದ್ದಾರೆ.
ತಮಿಳುನಾಡಿನ ಬೇಡಿಕೆ: ತಮಿಳುನಾಡು ಅಧಿಕಾರಿಗಳು ಬೆಳೆ ಸಂರಕ್ಷಣೆ ಮತ್ತು ತಮ್ಮ ಪಾಲಿನ ನಿಗದಿತ ನೀರನ್ನು ತಕ್ಷಣ ಬಿಲಿಗುಂಡ್ಲು ಮೂಲಕ ಹರಿಸಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆಯಿದೆ.
ಉಭಯ ರಾಜ್ಯಗಳ ವಾದ-ಪ್ರತಿವಾದ ಹಾಗೂ ವಾಸ್ತವ ಸ್ಥಿತಿಗತಿಗಳ ಮನವಿಗಳನ್ನು ಸಂಪೂರ್ಣವಾಗಿ ಆಲಿಸಿದ ಬಳಿಕವಷ್ಟೇ ಪ್ರಾಧಿಕಾರವು ಅಂತಿಮ ತೀರ್ಮಾನ ಪ್ರಕಟಿಸಲಿದೆ.
ಕೆಆರ್ಎಸ್ ನೀರಿನ ಮಟ್ಟ 95 ಅಡಿಗೆ ಕುಸಿತ:
ಸದ್ಯ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಸುಮಾರು 95 ಅಡಿಗೆ ಕುಸಿದಿದ್ದು, ಒಳಹರಿವು ಕೂಡ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಈಗಾಗಲೇ ರಾಜ್ಯದಲ್ಲಿ ತೀವ್ರ ನೀರಿನ ಕೊರತೆ ಕಾಡುತ್ತಿರುವಾಗ, ಒಂದು ವೇಳೆ ಅWಒಂ ಸಭೆಯಲ್ಲಿ ತಮಿಳುನಾಡಿಗೆ ಮತ್ತೆ ನೀರು ಬಿಡಲೇಬೇಕು ಎಂದು ಕಡ್ಡಾಯ ಆದೇಶ ಹೊರಡಿಸಿದರೆ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಇದನ್ನೂ ಓದಿ: ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ – ಉತ್ಪಾದನೆ ಕುಂಠಿತ
ಬೆಂಗಳೂರು ಸೇರಿ ಕಾವೇರಿ ಕೊಳ್ಳದಲ್ಲಿ ಹಾಹಾಕಾರದ ಭೀತಿ:
ಜಲಾಶಯದಲ್ಲಿ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿರುವುದರಿಂದ, ರೈತರ ಕೃಷಿ ಬೆಳೆಗಳಿರಲಿ, ಕನಿಷ್ಠ ಸಾರ್ವಜನಿಕರ ದೈನಂದಿನ ಕುಡಿಯುವ ನೀರಿಗೂ ಗಂಭೀರ ಸಮಸ್ಯೆ ಎದುರಾಗುವ ಭೀತಿ ಕಾಡುತ್ತಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಕಾವೇರಿ ಕೊಳ್ಳದ ನಗರ-ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಜೀವಜಲಕ್ಕೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಮನೆಮಾಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ದೆಹಲಿಯ ಸಭೆಯಲ್ಲಿ ಪ್ರಾಧಿಕಾರ ರಾಜ್ಯದ ಸಂಕಷ್ಟವನ್ನು ಪರಿಗಣಿಸಿ ಸಮಾಧಾನಕರ ನಿರ್ಧಾರ ಕೈಗೊಳ್ಳಲಿದೆಯೇ ಅಥವಾ ಮತ್ತೆ ನೀರು ಬಿಡುವಂತೆ ಆದೇಶಿಸಲಿದೆಯೇ ಎಂಬ ಆತಂಕದಲ್ಲಿ ಕರುನಾಡ ಜನತೆ ಹಾಗೂ ರೈತ ಸಮುದಾಯ ಕಾಯುತ್ತಿದ್ದಾರೆ. ಇದನ್ನೂ ಓದಿ: ಸಿಎಂ ವಿಡಿಯೋ ಮಾತುಕತೆಗೂ ನಿಲ್ಲದ ಮುಷ್ಕರ – 9ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ
