-ಮದುವೆ ಸ್ವಲ್ಪ ದಿನದಲ್ಲೇ ಇತ್ತು, ನನ್ನ ಹುಟ್ಟುಹಬ್ಬದಂದೇ ಕೈಬಿಟ್ಟೆ ಎಂದು ಇನ್‌ಸ್ಟಾದಲ್ಲಿ ಭಾವುಕ ಪೋಸ್ಟ್
ಮುಂಬೈ: ಅದ್ದೂರಿ ವಿವಾಹಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಟ್ರೆಕ್ಕಿಂಗ್‌ಗೆಂದು ಕರೆದೊಯ್ದು ಭಾವಿ ಪತಿಯನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಒಂದೊಂದಾಗಿಯೇ ರೋಚಕ ಮಾಹಿತಿಗಳು ಹೊರಬೀಳುತ್ತಿವೆ.
ಭಾವಿ ಪತಿಯನ್ನು ಕೊಲೆ ಮಾಡಿದ ಬಳಿಕ ತನಗೇನು ತಿಳಿಯದಂತೆ ಇನ್‌ಸ್ಟಾಗ್ರಾಮ್‌ನಲ್ಲಿ, ನನ್ನ ಹುಟ್ಟುಹಬ್ಬದಂದೇ ಬಿಟ್ಟು ಹೋದೆ. ಆದರೆ ನೀನು ಇಲ್ಲೇ ಇದ್ದೀಯಾ ಅಂತ ನನ್ನ ಮನಸ್ಸಿಗೆ ಗೊತ್ತು ಎಂದು ಭಾವುಕ ಸ್ಟೋರಿ ಹಾಕಿ ಮೊಸಳೆ ಕಣ್ಣೀರಿಟ್ಟಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ ಹಂತಕಿ ಕೊಲೆ ರಹಸ್ಯ ಬಯಲಾಗುತ್ತಿದೆ. ಇದನ್ನೂ ಓದಿ: ಆಕಸ್ಮಿಕ ಸಾವಲ್ಲ, ಪ್ರಿವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ವರನನ್ನು 400 ಅಡಿ ಕಂದಕಕ್ಕೆ ತಳ್ಳಿ ಕೊಂದ ಹೈಟೆಕ್ ಜೋಡಿ!

ಕೇತನ್ ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ, ಸಿಯಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇಬ್ಬರೂ ಜೊತೆಯಾಗಿ ಡ್ಯಾನ್ಸ್ ಮಾಡುತ್ತಿರುವ ರೋಮ್ಯಾಂಟಿಕ್ ವಿಡಿಯೋವನ್ನು ಹಂಚಿಕೊಂಡಿದ್ದಳು. ಜೊತೆಗೆ, “ನನ್ನ ಹುಟ್ಟುಹಬ್ಬದಂದೇ ನನ್ನನ್ನು ಬಿಟ್ಟು ಹೋದೆ. ಮದುವೆ ಇಷ್ಟು ಹತ್ತಿರವಿರುವಾಗ ಯಾಕೆ ಹೀಗೆ ಮಾಡಿದೆ? ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೆ, ನೀನು ಇಲ್ಲೇ ಇದ್ದೀಯಾ ಅಂತ ಮನಸ್ಸಿಗೆ ಗೊತ್ತು. ವಾಪಸ್ ಬಂದುಬಿಡು” ಎಂದು ಹಿಂದಿ ಹಾಡಿನೊಂದಿಗೆ ಭಾವುಕವಾಗಿ ಬರೆದುಕೊಂಡಿದ್ದಳು.

ಅಪಘಾತವೆಂದು ಬಿಂಬಿಸಲು ಯತ್ನ:
ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಆದರೆ ಇದರ ಮುನ್ನಾ ದಿನ ಜೂನ್ 18ರಂದು ಬರ್ತ್ಡೇ ಆಚರಣೆ ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನೆಪದಲ್ಲಿ ಕೇತನ್‌ನನ್ನು ಸಿಯಾ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಢ್ ಕೋಟೆಗೆ ಕರೆತಂದಿದ್ದಳು. ಅಲ್ಲಿಗೆ ಆಕೆಯ ಪ್ರೇಮಿ ಚೇತನ್ ಕೂಡ ಬಂದಿದ್ದ. ಇಬ್ಬರೂ ಸೇರಿ ಕೋಟೆಯ ಮೇಲಿಂದ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದ ಸಿಯಾ, ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಕಾಲು ಜಾರಿ ಕೇತನ್ ಕೆಳಗೆ ಬಿದ್ದಿದ್ದಾನೆ ಎಂದು ಕಥೆ ಕಟ್ಟಿದ್ದಳು. ಆರಂಭದಲ್ಲಿ ಪೊಲೀಸರು ಇದನ್ನು ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ – ಸಿಎಂ ವಿಜಯ್ ಕೈಸನ್ನೆ, ಇತ್ತ ಡಿಎಂಕೆ ವಾಕೌಟ್
ಅನುಮಾನ ಬಂದಿದ್ದು ಹೇಗೆ?
ಪೊಲೀಸರು ತನಿಖೆ ಮುಂದುವರಿಸಿದಾಗ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಅನುಮಾನ ಮೂಡಿದೆ. ನಂತರ ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಚೇತನ್ ಚೌಧರಿಯೊಂದಿಗೆ ಸಂಬಂಧವಿರುವುದು ಹಾಗೂ ಕೊಲೆಯ ಕರಾಳ ಸತ್ಯ ಬಯಲಾಗಿದೆ.

ಸಿಯಾಳಿಗೆ ಮನೆಯವರು ನಿಶ್ಚಯಿಸಿದ್ದ ಕೇತನ್ ಜೊತೆ ಮದುವೆಯಾಗಲು ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಬಾಳಲು ಕೇತನ್ ಅಡ್ಡಿಯಾಗಿದ್ದಾನೆಂದು ಭಾವಿಸಿ ಇಬ್ಬರೂ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದರು. ಕೋಟೆಯ ತುದಿಗೆ ಬಂದಾಗ ಸಿಯಾ ತನ್ನ ಪ್ರಿಯಕರ ಚೇತನ್‌ನನ್ನು ರಹಸ್ಯವಾಗಿ ಅಲ್ಲಿಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದರು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿ: ಕೋಚಿಂಗ್ ಸೆಂಟರ್ ಅಗ್ನಿ ಅವಘಡದಲ್ಲಿ 15 ಜನ ಸಾವು – ಕಟ್ಟಡ ತೆರವಿಗೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಆದೇಶ
ಅಪಘಾತ ಎಂದು ನಂಬಿದ್ದ ಮಗನ ಸಾವು, ಮದುವೆಯಾಗಬೇಕಿದ್ದ ಹುಡುಗಿಯಿಂದಲೇ ನಡೆದ ಕ್ರೂರ ಕೊಲೆ ಎಂದು ತಿಳಿದುಬಂದಿರುವುದು ಕೇತನ್ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಮೃತ ಕೇತನ್ ತಂದೆ ವಿಶಾಲ್ ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮೃತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಬಾಬುಲಾಲ್ ಚೌಧರಿಯನ್ನು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೇತನ್ ಮತ್ತು ಸಿಯಾ ವಿವಾಹ ಈ ವರ್ಷದ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಈ ಸಂಬಂಧ ಕುಟುಂಬಗಳು ರಾಜಸ್ಥಾನದ ಅರಮನೆಯೊಂದರಲ್ಲಿ ಅದ್ಧೂರಿ ಮದುವೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದವು.
ಕೊಲೆ ನಡೆದ ಲೋಹಗಢ್ ಕೋಟೆಯು (Lohaghad Fort) ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಹೊಂದಿರುವ ಹಾಗೂ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರಸಿದ್ಧ ತಾಣವಾಗಿದ್ದು, ಈ ಘಟನೆಯಿಂದ ಪ್ರವಾಸಿಗರಲ್ಲಿ ಆತಂಕವನ್ನುಂಟು ಮಾಡಿದೆ.ಇದನ್ನೂ ಓದಿ: ಲಕ್ನೋ ಅಗ್ನಿ ಅವಘಡ | ಅಪ್ಪಾ, ಇಲ್ಲಿ ಬೆಂಕಿ ಹೊತ್ತಿಕೊಂಡಿದೆ, ನನ್ನನ್ನು ಕಾಪಾಡು ಬಾ: ತಂದೆಗೆ ಕರೆ ಮಾಡಿದ್ದ ಮಗ
