ಮುಂಬೈ: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ(Lohagad Fort) ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್(Ketan Vishal Agarwal) ಅವರ ನಿಗೂಢ ಸಾವು ಇದೀಗ ಭೀಕರ ಕೊಲೆ (Murder) ಪ್ರಕರಣವಾಗಿ ಬದಲಾಗಿದೆ.
ಈಗ ಪುಣೆ ಗ್ರಾಮಾಂತರ ಪೊಲೀಸರು (Pune Police) ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.
ನಡೆದಿದ್ದು ಏನು?
ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಿಗ್ಗೆ, ಭಾವಿ ಪತ್ನಿಯ ಬರ್ತ್‌ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಬಂದಿದ್ದರು. ಕೋಟೆಯ ತುದಿಯಲ್ಲಿ ಬೆಳಿಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು (Accidental Death) ಎಂದು ಪ್ರಕರಣ ದಾಖಲಿಸಿದ್ದರು.
ಅನುಮಾನ ಬಂದಿದ್ದು ಹೇಗೆ?
ಪೊಲೀಸರು ತನಿಖೆ ಮುಂದುವರಿಸಿದಾಗ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಅನುಮಾನ ಮೂಡಿದೆ. ನಂತರ ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಕರಾಳ ಸತ್ಯ ಬಯಲಾಗಿದೆ.
ಸಿಯಾಳಿಗೆ ಮನೆಯವರು ನಿಶ್ಚಯಿಸಿದ್ದ ಕೇತನ್ ಜೊತೆ ಮದುವೆಯಾಗಲು ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಬಾಳಲು ಕೇತನ್ ಅಡ್ಡಿಯಾಗಿದ್ದಾನೆಂದು ಭಾವಿಸಿ ಇಬ್ಬರೂ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದರು. ಕೋಟೆಯ ತುದಿಗೆ ಬಂದಾಗ ಸಿಯಾ ತನ್ನ ಪ್ರಿಯಕರ ಚೇತನ್‌ನನ್ನು ರಹಸ್ಯವಾಗಿ ಅಲ್ಲಿಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದರು.
What was initially believed to be a tragic trekking accident at Lohagad Fort near Lonavala has now been revealed as an alleged murder plot. Pune Rural Police have arrested Siya Goel, the fiancée of deceased Ketan Agarwal, and her alleged lover Chetan Chaudhary after an… pic.twitter.com/bS9FyfpkDC
— Pune Mirror (@ThePuneMirror) June 23, 2026
ಎರಡನೇ ಪ್ರಯತ್ನದಲ್ಲಿ ಹತ್ಯೆ:
ಪೊಲೀಸ್ ಮೂಲಗಳ ಪ್ರಕಾರ, ಕೇತನ್‌ನನ್ನು ಕೊಲ್ಲಲು ಸಿಯಾ ಮತ್ತು ಚೇತನ್ ಚೌಧರಿ ನಡೆಸಿದ ಎರಡನೇ ಪ್ರಯತ್ನ ಇದಾಗಿತ್ತು. ಜೂನ್ 14 ರಂದೂ ಇದೇ ಕೋಟೆಗೆ ಕೇತನ್‌ನನ್ನು ಕರೆತಂದು ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಯತ್ನಿಸಿದ್ದರು ಆದರೆ ಅದು ವಿಫಲವಾಗಿತ್ತು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಮಗಳು
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೇತನ್ ಮತ್ತು ಸಿಯಾ ವಿವಾಹ ಈ ವರ್ಷದ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಈ ಸಂಬಂಧ ಕುಟುಂಬಗಳು ರಾಜಸ್ಥಾನದ ಅರಮನೆಯೊಂದರಲ್ಲಿ ಅದ್ಧೂರಿ ಮದುವೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದವು.
ಈಗ ಅಪಘಾತ ಎಂದು ನಂಬಿದ್ದ ಮಗನ ಸಾವು, ಮದುವೆಯಾಗಬೇಕಿದ್ದ ಹುಡುಗಿಯಿಂದಲೇ ನಡೆದ ಕ್ರೂರ ಕೊಲೆ ಎಂದು ತಿಳಿದುಬಂದಿರುವುದು ಕೇತನ್ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದಿರುವ ಪುಣೆ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
