ಶಿವಮೊಗ್ಗ: ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವಕೀಲರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನಿದಿಗೆ ಬಳಿ ನಡೆದಿದೆ.
ಮೃತ ವಕೀಲರನ್ನು ಭದ್ರಾವತಿ ನಿವಾಸಿ ಗಂಗಾಧರ್ ಎಂದು ಗುರುತಿಸಲಾಗಿದೆ. ವಕೀಲ ಗಂಗಾಧರ್ ಶುಕ್ರವಾರ ರಾತ್ರಿ ಶಿವಮೊಗ್ಗದಲ್ಲಿ ಆಯೋಜನೆಗೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮಧ್ಯೆ ರಾತ್ರಿ ಶಿವಮೊಗ್ಗದಿಂದ ವಾಪಸ್ ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕತ್ತಲೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ವಕೀಲ ಗಂಗಾಧರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Advertisement
ಮಧ್ಯರಾತ್ರಿ ಆಗಿದ್ದರಿಂದ ಲಾರಿ ಚಾಲಕ ತನ್ನ ಲಾರಿಯನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ. ಆದರೆ ಚಾಲಕ ಪಾರ್ಕಿಂಗ್ ಲೈಟ್ ಹಾಕದೇ ಇದ್ದುದ್ದರಿಂದ ಕಾರು ಚಾಲನೆ ಮಾಡುತ್ತಿದ್ದ ವಕೀಲರಿಗೆ ರಸ್ತೆ ಬದಿಯಲ್ಲಿ ಲಾರಿ ನಿಂತಿರುವುದು ಗೊತ್ತಾಗದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಮೃತ ವಕೀಲರ ಸ್ನೇಹಿತರು ಆರೋಪಿಸಿದ್ದಾರೆ.
Advertisement
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.