ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಕುಸಿದಿರುವ ಬೆನ್ನಲ್ಲೇ, ಕೆಆರ್‌ಎಸ್ (KRS) ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಜಿಲ್ಲೆಯ ರೈತರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ (Mandya) ರೈತರ ಜೀವನಾಡಿಯಾಗಿರುವ ವಿಸಿ (ವಿಶ್ವೇಶ್ವರಯ್ಯ) ನಾಲೆಗೆ (VC Canal) ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವ ಅಧಿಕಾರಿಗಳು, ಕಾವೇರಿ ನದಿಗೆ ಮಾತ್ರ ಭಾರಿ ಪ್ರಮಾಣದಲ್ಲಿ ನೀರು ಹರಿಸುತ್ತಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ 4,917 ಕ್ಯೂಸೆಕ್ ನೀರು ರಿಲೀಸ್
ಕೇವಲ ನಾಲೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನೀರು ಬಳಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅಧಿಕಾರಿಗಳು ನದಿಗೆ ಬರೋಬ್ಬರಿ 2,300 ಕ್ಯೂಸೆಕ್ ನೀರು ಹರಿಸುತ್ತಿರುವುದು ಜನರ ದಿಕ್ಕು ತಪ್ಪಿಸುವ ತಂತ್ರ ಎಂದು ರೈತರು ಆರೋಪಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ ನಮ್ಮ ರೈತರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆ. ನಾಡಿನ ರೈತರ ಬೆಳೆಗಳಿಗೆ ನೀರು ಒದಗಿಸುವ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡದ ಸರ್ಕಾರ, ತಮಿಳುನಾಡಿಗೆ ನೀರು ಬಿಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅನ್ನದಾತರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು
ಜಲಾನಯನ ಪ್ರದೇಶದಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿರುವುದರಿಂದ ಕೆಆರ್‌ಎಸ್ ಡ್ಯಾಂನ ಒಳಹರಿವು ಕೇವಲ 1,752 ಕ್ಯೂಸೆಕ್‌ಗೆ ಕುಸಿದಿದೆ. ಬರುವ ನೀರಿನ ಪ್ರಮಾಣಕ್ಕಿಂತ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದು ಮುಂದಿನ ದಿನಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಂದೊಡ್ಡುವ ಆತಂಕ ಮೂಡಿಸಿದೆ.

