ಬೆಂಗಳೂರು: ಬೆಂಗಳೂರಿನ ಕೆ.ಆರ್ ಪುರಂದ(K R Puram) ಸಿಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ತ್ರಿವಳಿ ಕೊಲೆ(Triple Murder Case) ಪ್ರಕರಣದ ಪ್ರಮುಖ ಆರೋಪಿಗಳಾದ ಶ್ವೇತಾ ಮತ್ತು ಕೆನತ್‌ನನ್ನು ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಇದೇ ವೇಳೆ ಕೃತ್ಯವನ್ನು ಮರುಸೃಷ್ಟಿ (Crime Reconstruction) ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಪೊಲೀಸರು ಆರೋಪಿಗಳ ಮುಂದೆ ಕೃತ್ಯ ನಡೆದ ರೀತಿಯನ್ನು ಒಂದೊಂದಾಗಿ ಪರಿಶೀಲಿಸಿದ್ದಾರೆ. ಮೊದಲು ಯಾರ ಮೇಲೆ ದಾಳಿ ನಡೆಸಲಾಯಿತು? ನಂತರ ಯಾರನ್ನು ಕೊಲೆ ಮಾಡಲಾಯಿತು? ಯಾರು ಹಲ್ಲೆ ನಡೆಸಿದರು? ಇಬ್ಬರ ಪಾತ್ರ ಏನಿತ್ತು? ಕೊಲೆ ಬಳಿಕ ಏನು ಮಾಡಿದರು? ಎಂಬ ಪ್ರತಿಯೊಂದು ಪ್ರಶ್ನೆಗೆ ಆರೋಪಿಗಳಿಂದ ಉತ್ತರ ಪಡೆದು ಅದರ ವಿಡಿಯೊ ದಾಖಲಿಸಿಕೊಂಡಿದ್ದಾರೆ.
ತನಿಖೆ ವೇಳೆ ಬೆಚ್ಚಿಬೀಳಿಸುವ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬಂದಿವೆ. ಕೊಲೆ ನಡೆದ ಬಳಿಕ ಆರೋಪಿಗಳು ಬಿಸಿ ನೀರಿನಲ್ಲಿ ಖಾರದ ಪುಡಿ ಬೆರೆಸಿ ಮನೆಯ ವಿವಿಧ ಭಾಗಗಳಲ್ಲಿ ಚೆಲ್ಲಿದ್ದರು. ಇದರಿಂದ ತನಿಖೆಯ ದಿಕ್ಕು ತಪ್ಪಿಸಲು ಅಥವಾ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆಯೇ ಎಂಬ ಅನುಮಾನವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.ಇದನ್ನೂ ಓದಿ: ಹಾನಗಲ್ ಕಾರಹುಣ್ಣಿಮೆ ವೇಳೆ ಗಲಾಟೆ; 24 ಹಿಂದೂಗಳು, 26 ಮುಸ್ಲಿಂ ಯುವಕರ ವಿರುದ್ಧ ಕೇಸ್ ದಾಖಲು
ಪ್ರಕರಣದ ಪ್ರತಿಯೊಂದು ಅಂಶವನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಕೃತ್ಯ ಮರುಸೃಷ್ಟಿಯ ವೇಳೆ ಸಂಗ್ರಹಿಸಿದ ವಿಡಿಯೊ, ಸ್ಥಳ ಮಹಜರು ಮತ್ತು ಇತರೆ ಸಾಕ್ಷ್ಯಗಳು ತನಿಖೆಗೆ ಪ್ರಮುಖ ಆಧಾರವಾಗಲಿವೆ. ಆರೋಪಿಗಳ ವಿರುದ್ಧ ಇನ್ನಷ್ಟು ಬಲವಾದ ಸಾಕ್ಷ್ಯಗಳನ್ನು ಕಲೆಹಾಕುವ ಕೆಲಸವನ್ನು ಕೆ.ಆರ್ ಪುರಂ ಪೊಲೀಸರು ಮುಂದುವರೆಸಿದ್ದಾರೆ.ಇದನ್ನೂ ಓದಿ: ಕೋಚಿಂಗ್ ಸೆಂಟರ್ ಮೇಲ್ಛಾವಣಿ ಕುಸಿದು 14 ಮಕ್ಕಳು ದುರ್ಮರಣ – ಹಲವರಿಗೆ ಗಾಯ
