ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಹಿಂದೆ 18 ತಿಂಗಳು ಜೈಲುವಾಸ ಅನುಭವಿಸಿದ್ದ ಆಮ್ ಆದ್ಮಿ ಪಕ್ಷದ (AAP) ನಾಯಕ ಹಾಗೂ ದೆಹಲಿಯ ಮಾಜಿ ಜಲಸಂಪನ್ಮೂಲ ಸಚಿವ ಸತ್ಯೇಂದ್ರ ಜೈನ್(Satyendar Jain) ಅವರನ್ನು, ದೆಹಲಿ ಜಲ ಮಂಡಳಿಯ (DJB) ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಮತ್ತೆ ಬಂಧಿಸಲಾಗಿದೆ.
ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ACB) ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕಗಳ (STP) ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಅಕ್ರಮ, ಟೆಂಡರ್ ಷರತ್ತುಗಳ ತಿರುಚುವಿಕೆ ಮತ್ತು ಕ್ರಿಮಿನಲ್ ಪಿತೂರಿ ನಡೆದಿರುವ ಕುರಿತು ಜಾಗೃತ ನಿರ್ದೇಶನಾಲಯ ದೂರು ದಾಖಲಿಸಿತ್ತು ಎಂದು ತಿಳಿಸಿದೆ. ಈ ಸಂಬಂಧ ತನಿಖೆ ನಡೆಸಿದ ಬಳಿಕ ಡಿಜೆಬಿಯ ಮಾಜಿ ಸಿಇಒ ಉದಿತ್ ಪ್ರಕಾಶ್ ರೈ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.
ಸತ್ಯೇಂದ್ರ ಜೈನ್ ಅವರ ಬಂಧನದ ಸುದ್ದಿ ಹೊರಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಎಎಪಿ, ಇದು ರಾಜಕೀಯ ಪ್ರೇರಿತ ಕ್ರಮ ಎಂದು ಬಣ್ಣಿಸಿದೆ. ಆರೋಪಿಸಲಾದ ಅಕ್ರಮ ನಡೆದ ಸಮಯದಲ್ಲಿ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿದ್ದರು ಎಂದು ಪಕ್ಷ ಹೇಳಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಎಎಪಿಯ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್ ಧಂಡಾ, “ಬಿಜೆಪಿ ಪಕ್ಷವು ಆಪ್‌ಗೆ ಎಷ್ಟು ಹೆದರಿದೆ ಎಂಬುದಕ್ಕೆ ಇನ್ನು ಎಷ್ಟು ಪುರಾವೆಗಳು ಬೇಕು? ಜಲ ಮಂಡಳಿಯ ಆ ಟೆಂಡರ್ ನಡೆದ ಸಂದರ್ಭದಲ್ಲಿ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿದ್ದರು. ಜೈಲಿನಲ್ಲಿದ್ದ ಅವರು ಇದಕ್ಕೆ ಹೇಗೆ ಜವಾಬ್ದಾರರಾಗುತ್ತಾರೆ? ಸತ್ಯೇಂದ್ರ ಜೈನ್ ಅವರು ಪಂಜಾಬ್‌ನ ಆಪ್ ಸಹ-ಉಸ್ತುವಾರಿಯಾಗಿದ್ದು, ಅಲ್ಲಿ ಶೀಘ್ರದಲ್ಲೇ ಚುನಾವಣೆಗಳು ಬರಲಿವೆ ಎಂಬುದೇ ಅವರ ಬಂಧನಕ್ಕೆ ಅಸಲಿ ಕಾರಣ” ಎಂದು ಆರೋಪಿಸಿದ್ದಾರೆ.

