ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ(Monsoon Rain) ಅಬ್ಬರ ಜೋರಾಗಿದ್ದು, ಕರಾವಳಿ(Coastal Karnataka) ಮತ್ತು ಮಲೆನಾಡು(Malenadu) ಭಾಗದ ಜಿಲ್ಲೆಗಳಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ರಾಜ್ಯದ ಪ್ರಮುಖ 6 ಜಿಲ್ಲೆಗಳಿಗೆ ನಾಳೆ ರೆಡ್ ಅಲರ್ಟ್ (Red Alert)ಘೋಷಿಸಿದೆ.
ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ನೀಡಲಾಗಿದೆ.
ಭಾರೀ ಮಳೆಯ ಮುನ್ನೆಚ್ಚರಿಕೆಯಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಸೇರಿದಂತೆ ಮಳೆಯ ತೀವ್ರತೆ ಹೆಚ್ಚಿರುವ ತಾಲ್ಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತದಲ್ಲಿ ಹಲವರ ಜೀವ ಉಳಿಸಿದ ಟ್ಯಾಂಕರ್ – ಭಯಾನಕ ಸಿಸಿಟಿವಿ ದೃಶ್ಯ ವೈರಲ್
ಸತತ ಮಳೆಯಿಂದಾಗಿ ಕರಾವಳಿ ಮತ್ತು ಮಲೆನಾಡಿನ ನದಿಗಳು, ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಮಳೆ ಬಿರುಸುಗೊಂಡಿರುವುದರಿಂದ ಕೃಷ್ಣಾ, ಘಟಪ್ರಭಾ ಮತ್ತು ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದನ್ನೂ ಓದಿ: ವಯನಾಡ್ ಭೂಕುಸಿತ ʻಮಾನವ ನಿರ್ಮಿತʼ – ಜೂ. 20 ರಂದೇ ಮಣ್ಣು ತೆರವುಗೊಳಿಸಲು ಸೂಚಿಸಲಾಗಿತ್ತು: ಸಿಎಂ ಸತೀಶನ್
ಸಾರ್ವಜನಿಕರು ಅನಗತ್ಯವಾಗಿ ನದಿ, ಹಳ್ಳ ಹಾಗೂ ಜಲಪಾತಗಳ ಬಳಿ ಹೋಗಬಾರದು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತದ ಸಹಾಯವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಎಷ್ಟು ಮಳೆಯಾಗಬಹುದು?
64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.
