ತಿರುವನಂತಪುರಂ: ವಯನಾಡಿನ (Wayanadu) ಮೆಪ್ಪಾಡಿಯಲ್ಲಿ ಭೀಕರ ಭೂಕುಸಿತ (Land Slide) ಸಂಭವಿಸಿದೆ. ನೀರಿನಂತೆ ಮಣ್ಣು ಹರಿದುಬಂದು ಅಪ್ಪಳಿಸಿದ ದೃಶ್ಯ ಸಮೀಪದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಟ್ಯಾಂಕರ್‌ವೊಂದು ಹಲವು ಜನರ ಜೀವ ಉಳಿಸಿರುವುದು ಕಂಡುಬಂದಿದೆ.
ವಯನಾಡು ಜಿಲ್ಲೆಯ ಕಲ್ಲಾಡಿಯ (Kalladi) ಮೀನಾಕ್ಷಿ ಸೇತುವೆಯ ಬಳಿ ನಿರ್ಮಾಣ ಹಂತದಲ್ಲಿರುವ ಅನಾಕ್ಕಂಪೋಯಿಲ್-ಮೆಪ್ಪಾಡಿ (Meppadi) ಸುರಂಗ ಮಾರ್ಗ ಯೋಜನೆಯ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಈ ವೇಳೆ ಸೇತುವೆ ಮೇಲೆ ನಿಂತಿದ್ದ ಟ್ಯಾಂಕರ್ ಹರಿದು ಬಂದ ಮಣ್ಣಿನ ರಭಸವನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿದಿದ್ದು, ಹಲವರ ಪ್ರಾಣ ಉಳಿಸಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ವಯನಾಡಿನಲ್ಲಿ ಮೇಘಸ್ಫೋಟ – ಇಬ್ಬರು ಕಾರ್ಮಿಕರು ಜೀವಂತ ಸಮಾಧಿ; 30 ಮಂದಿ ಮಿಸ್ಸಿಂಗ್
ತಮಿಳುನಾಡಿನ ಮಹಿಳೆ ಕೂಡಮ್ಮಾಳ್ ಹಾಗೂ ಅವರ ಪತಿ ಮೆಪ್ಪಾಡಿಗೆ ಹೋಗಲು ಬಸ್ಸಿಗಾಗಿ ಸೇತುವೆ ಬಳಿ ಕಾಯುತ್ತಾ ನಿಂತಿದ್ದರು. ಈ ವೇಳೆ ಮಣ್ಣು ಹರಿದುಬರುತ್ತಿರುವುದನ್ನು ಕಂಡು ದಿಕ್ಕಾಪಾಲಾಗಿ ಓಡಿ ಬಂದಿದ್ದಾರೆ. ಒಂದು ಕ್ಷಣ ಯಮ ಕಣ್ಮುಂದೆ ಬಂದು ಹೋದಂತಾಗಿದ್ದು, ಮಣ್ಣಿನಡಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ 6 ಮಂದಿಗಾಗಿ ಹುಡುಕಾಟ ಮುಂದುವರಿದಿದ್ದು, 9 ಜನ ಸೇಫ್ ಆಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಶ್ವಾನದಳದಿಂದ ತಪಾಸಣೆ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ವಿಡಿಯೋದಲ್ಲಿ ಏನಿದೆ?
ಭೀಕರ ಭೂಕುಸಿತಕ್ಕೂ ಮುನ್ನ ಸೇತುವೆ ಒಂದು ಬದಿಯಲ್ಲಿ ಕೆಲವರು ನಿಂತಿರುತ್ತಾರೆ. ನೋಡು ನೋಡುತ್ತಿದ್ದಂತೆ ಬೆಟ್ಟದ ಮೇಲಿಂದ ಭಾರೀ ಪ್ರಮಾಣದ ಮಣ್ಣು, ಕಲ್ಲು ಹಾಗೂ ಕೆಸರು ನೀರಿನಂತೆ ಹರಿದುಕೊಂಡು ಬರುತ್ತಿರುವುದು ಕಂಡುಬಂದಿದೆ. ಅಲ್ಲಿದ್ದ ಜನರು ಹಾಗೂ ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಾರೆ. ಕೆಲವೇ ಕ್ಷಣಗಳಲ್ಲಿ ಇಡೀ ರಸ್ತೆಗೆ ಕೆಸರು ನುಗ್ಗುತ್ತದೆ. ಇದನ್ನೂ ಓದಿ: ವಯನಾಡಿನಲ್ಲಿ ಭೂಕುಸಿತಕ್ಕೆ ಇಬ್ಬರು ಕಾರ್ಮಿಕರು ಬಲಿ – ಸಿಎಂ ಸತೀಶನ್ ತುರ್ತು ಸಭೆ
ಮಣ್ಣು ಹರಿದು ಬರುತ್ತಿರುವುದನ್ನು ಕಂಡು ಸೇತುವೆ ಮೇಲಿಂದ ಹೋಗುತ್ತಿದ್ದ ಟ್ಯಾಂಕರ್ ರಿವರ್ಸ್ ಬಂದಿದ್ದು, ಮಣ್ಣು ಜೋರಾಗಿ ಬಂದು ಅಪ್ಪಳಿಸಿದೆ. ಆದರೆ ಟ್ಯಾಂಕರ್ ಸ್ವಲ್ಪ ಮಟ್ಟಿಗೆ ಮಣ್ಣಿನ ರಭಸವನ್ನು ತಡೆಹಿಡಿದಿದ್ದು, ಇದರಿಂದ ಹಲವರ ಪ್ರಾಣ ಉಳಿದಿದೆ. ಮಣ್ಣಿನ ರಭಸ ಹೇಗಿತ್ತೆಂದರೆ ಸೇತುವೆ ಅಕ್ಕಪಕ್ಕ ಇದ್ದ ಗಿಡ, ಮರಗಳೆಲ್ಲ ಕಣ್ಣಿಗೆ ಕಾಣದಂತೆ ಮಣ್ಣಲ್ಲೇ ಮಣ್ಣಾಗಿ ಹೋಗಿವೆ. ವಿಡಿಯೋದಲ್ಲಿ ಜೀವ ಉಳಿಸಿಕೊಳ್ಳಲು ಜನ ಓಡಿಬಂದರೂ ಕೂಡ ಕೆಲವರು ಮಣ್ಣಿನಲ್ಲಿ ಸಿಲುಕೊಂಡಿರುವುದು ಹಾಗೂ ಮಣ್ಣಿನ ರಭಸದಿಂದ ತಳ್ಳಲ್ಪಟ್ಟಿರುವುದು ಕಂಡುಬಂದಿದೆ.
ಸದ್ಯ ಈ ದುರಂತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳಿಂದ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.ಇದನ್ನೂ ಓದಿ: ವಯನಾಡ್ ಭೂಕುಸಿತ ʻಮಾನವ ನಿರ್ಮಿತʼ – ಜೂ. 20 ರಂದೇ ಮಣ್ಣು ತೆರವುಗೊಳಿಸಲು ಸೂಚಿಸಲಾಗಿತ್ತು: ಸಿಎಂ ಸತೀಶನ್
