ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಆಯೋಜಿಸಿದ್ದ ನಂದಿಹಿಲ್ಸ್ ಮನ್ಸೂನ್ ಮ್ಯಾರಥಾನ್‌ನಲ್ಲಿ (Nandi Hills Monsoon Marathon) ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಮೃತ ದುರ್ದೈವಿ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 21 ಕಿಲೋಮೀಟರ್ ಓಟದಲ್ಲಿ ಪಾಲ್ಗೊಂಡಿದ್ದ ಅಮನ್ ದೀಪ್, ನಂದಿಬೆಟ್ಟ ಹತ್ತುವ ವೇಳೆ ಏಕಾಏಕಿ ಕುಸಿದು ಬಿದ್ದರು. ಮ್ಯಾರಥಾನ್ ಆಯೋಜಕರು ತಕ್ಷಣ ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆರು ತಿಂಗಳ ಬಳಿಕ ಪತಿ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ – ಖತರ್‌ನಾಕ್ ಲೇಡಿ, ಪ್ರಿಯಕರ ಅರೆಸ್ಟ್
ಅವರು 21 ಕಿಲೋಮೀಟರ್ ಓಟದಲ್ಲಿ ಅರ್ಧದಷ್ಟು ದೂರವನ್ನು ಕ್ರಮಿಸಿದ್ದರು ಎನ್ನಲಾಗಿದೆ. ಇಂದಿನ 21 ಕಿಲೋಮೀಟರ್ ರನ್ನಿಂಗ್ ಕುರಿತು ಅಮನ್ ದೀಪ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ “ಇಂದಿನ 21 ಕಿಲೋಮೀಟರ್ ರನ್ನಿಂಗ್‌ನಲ್ಲಿ ದೇವರು ಜೊತೆಗಿದ್ದಾನೆ” ಎಂಬರ್ಥದ ಸಂದೇಶವನ್ನು ಬರೆದುಕೊಂಡಿದ್ದರು. ಆದರೆ ಇದೆ ಅವರ ಅಂತಿಮ ದಿನವಾಗಿದೆ.
ಆರೋಗ್ಯವಾಗಿಯೇ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅಮನ್ ದೀಪ್, ಓಟದ ನಡುವೆಯೇ ಮೃತಪಟ್ಟಿರುವುದು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸಾವಿರಾರು ಓಟಗಾರರು ಹಾಗೂ ಆಯೋಜಕರಲ್ಲಿ ಆತಂಕ ಮೂಡಿಸಿದೆ. ಇಂದಿನ ಮ್ಯಾರಥಾನ್‌ನಲ್ಲಿ 4,500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದನ್ನೂ ಓದಿ: ದೆಹಲಿಗೆ ಹಣ ಕೊಡಲು ಈ ಯೋಜನೆ ಬೇಕಾ? – ಬಿಡದಿ ಟೌನ್‌ಶಿಪ್ ಬಗ್ಗೆ ಹೆಚ್‌ಡಿಕೆ ಕಿಡಿ



