ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸುತ್ತಾನೆ, ಆತ ಎದುರಿಸುವ ಸವಾಲುಗಳೇನು ಎಂಬುದನ್ನು ಹೇಳುವ ಕಾಮನ್ಮ್ಯಾನ್ ಅದ್ದೂರಿಯಾಗಿ ತೆರೆಗೆ ಬರಲು ರೆಡಿಯಾಗುತ್ತಿದೆ.
ಸೋಷಿಯಲ್ ವರ್ಕರ್ ಎನ್. ನರಸಿಂಹಮೂರ್ತಿ ಅವರು ಈ ಕಥೆ ಬರೆದು ಸುರಭಿ ಫಿಲಂಸ್ ಅಡಿ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪಂಚತಾರಾ ಹೋಟೆಲಿನಲ್ಲಿ ಈ ಚಿತ್ರದ ನಾಲ್ಕು ವಿವಿಧ ಶೈಲಿಯ ಹಾಡುಗಳನ್ನು ಚಿತ್ರರಂಗದ ನಾಲ್ವರು ಸೆಲೆಬ್ರಿಟಿಗಳು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಿರಿಯ ನಟಿ, ವಿ.ಪ. ಸದಸ್ಯೆ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯನಟ ರಮೇಶ್ ಭಟ್, ನಟಿ ಪ್ರಿಯಾಂಕ ಉಪೇಂದ್ರ ಅವರುಗಳು ನಾಲ್ಕು ಹಾಡುಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇ ರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಇವತ್ತು ನಮಗಿಂತ, ಇಲ್ಲಿ ಬಂದ ಅತಿಥಿಗಳು ನಮ್ಮ ಚಿತ್ರದ ಬಗ್ಗೆ ಹೆಚ್ಚು ಮಾತಾಡಲಿ ಎಂದು ಹೇಳಿದರು. ವೇದಿಕೆಯಲ್ಲಿ ಸಾಂಗ್ ಲಾಂಚ್ ಮಾಡಿದ ವಿ.ಪ. ಸದಸ್ಯೆ ಉಮಾಶ್ರೀ ಮಾತನಾಡಿ ಈ ಚಿತ್ರದ ಹೆಸರು ಕಾಮನ್ ಮ್ಯಾನ್, ಇಂಗ್ಲೀಷ್ ಹೆಸರು ಏಕೆ ಅಂತ ಕೇಳಬಹುದು, ಇವತ್ತು ನಮ್ಮ ಕನ್ನಡ ಚಿತ್ರಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಹೆಸರು ಮಾಡುತ್ತಿರುವಾಗ ಇಂಥ ಕಾಮನ್ ಟೈಟಲ್ ಇಡಲೇಬೇಕಾಗುತ್ತೆ. ಸಾಯಿಪ್ರಕಾಶ್ ಅವರು ನನ್ನ ಗುರುಗಳ ಥರ, ಈ ಕಾರ್ಯಕ್ರಮಕ್ಕೆ ಅವರು ಕರೆದಾಗ ಇಲ್ಲ ಎನ್ನಲಾಗಲಿಲ್ಲ. ಒಂದು ಕಾಲದಲ್ಲಿ ನನ್ನ ಎನ್.ಎಸ್.ರಾವ್ ಕಾಂಬಿನೇಷನ್ ತುಂಬಾ ಜನಪ್ರಿಯವಾಗಿತ್ತು. ಪ್ರೇಕ್ಷಕರು ನಮ್ಮಿಬ್ಬರನ್ನೂ ನಿಜವಾದ ಗಂಡ, ಹೆಂಡತಿ ಅಂದುಕೊಂಡಿದ್ದರು. ಅವರು ತೀರಿಕೊಂಡಾಗ ಕೆಲವರು ಇನ್ನು ಉಮಾಶ್ರೀ ಕಥೆ ಮುಗಿದೇ ಹೋಯ್ತು ಅಂತ ಮಾತಾಡಿದ್ದರು. ಅದೇ ವೇಳೆ ನಾನು ವಿಧವೆಯಾಗಿ ನಟಿಸಿದ್ದ ಚಿತ್ರವೂ ರಿಲೀಸಾಯ್ತು. ಅಂಥಾ ಸಮಯದಲ್ಲಿ ಸಾಯಿಪ್ರಕಾಶ್ ಅವರು ನನಗೆ ಕರೆದು ಅವಕಾಶ ಕೊಟ್ಟರು ಎಂದು ನೆನಪಿಸಿಕೊಂಡರು.
ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ರಮೇಶ್ ಭಟ್ ಮಾತನಾಡಿ, ನನಗೆ ಒಳ್ಳೆ ಸಾಂಗನ್ನೇ ಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಮಟ್ಟ ಹಾಕುವದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಅವಕಾಶ ಕೊಟ್ಟ ಗುರುಗಳಿಗೆ ಧನ್ಯವಾದ ಎಂದರು. ಇದನ್ನೂ ಓದಿ: BBK 13 | ದೊಡ್ಮನೆಗೆ ಸಂಗೀತಾ ಭಟ್ – ಕಾವ್ಯ ಗೌಡ ಎಂಟ್ರಿ; ಸುದರ್ಶನ್ ಪರಿಸ್ಥಿತಿ ದೇವ್ರೇ ಗತಿ!
ನಟ ವಿನೋದ್ ಪ್ರಭಾಕರ್ ಮಾತನಾಡಿ, ನನ್ನ ತಂದೆಯ ಜತೆ ಕೆಲಸ ಮಾಡಿದ ಎಲ್ಲರನ್ನೂ ಈ ವೇದಿಕೆಯಲ್ಲಿ ನೋಡಿ ಸಂತೋಷವಾಯಿತು ಎಂದರು. ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗರ್ ಅವರು ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಒಬ್ಬ ಕಾಮನ್ಮ್ಯಾನ್ ರಾಜ್ಯದ ಸಿಎಂ ಆದರೆ, ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರ ಮೂಲಕ ಹೇಳಿದ್ದಾರೆ.
ಗೌರೀಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ. ವಿನಯ ಚಂದ್ರ ಅವರ ಸಂಗೀತ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಕಾಮನ್ಮ್ಯಾನ್ ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಇತರರು ನಟಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋಗೆ ಕೌಂಟ್ಡೌನ್ – ದೊಡ್ಮನೆಗೆ ಬರೋ ಕಂಟೆಸ್ಟೆಂಟ್ಗಳು ಯಾರು?
