– ದೋಸ್ತಿಗಳ ಪಾದಯಾತ್ರೆಗೆ ಚಾಲನೆ
ರಾಮನಗರ: ದೆಹಲಿಗೆ ಹಣ ಕೊಡಲು ಬಿಡದಿ ಟೌನ್‌ಶಿಪ್ (Bidadi Township) ಯೋಜನೆ ಬೇಕಾ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್‌ಶಿಪ್ (JDS) ಯೋಜನೆ ವಿರೋಧಿಸಿ ದೋಸ್ತಿಗಳು ನಡೆಸುತ್ತಿರುವ ಪಾದಯಾತ್ರೆಗೆ (BJP) ಭೈರಮಂಗಲ ಗ್ರಾಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಹೆಚ್‌ಡಿಕೆ, ರೈತರ ಹಿತಕ್ಕಾಗಿ ಜೆಡಿಎಸ್ ಪಾದಯಾತ್ರೆ ನಡೆಸುತ್ತಿದೆ. ಕಳೆದ 515 ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಯಾವುದೇ ರೀತಿಯ ಬೆದರಿಕೆಗೆ ಬಗ್ಗದೇ ರೈತರು ಹೋರಾಟ ಮುಂದುವರಿಸಿದ್ದಾರೆ. ನಮ್ಮ ಪಾದಯಾತ್ರೆ ರೈತರ ಹಿತಕ್ಕಾಗಿ ನಡೆಯುತ್ತಿದೆಯೇ ಹೊರತು ರಾಜಕೀಯ ಸ್ವಾರ್ಥಕ್ಕಾಗಿ ಅಲ್ಲ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ನವರು ಜೆಡಿಎಸ್ ಮೇಲೆ ಆರೋಪ ಮಾಡುತ್ತಿದ್ದಾರೆ. 2006ರಲ್ಲಿ ಯೋಜನೆ ಪ್ರಾರಂಭಿಸಿದಾಗ ಇದ್ದ ತೀರ್ಮಾನವೇ ಬೇರೆ ಆಗಿತ್ತು. ನಮ್ಮ ಅವಧಿಯಲ್ಲಾಗಲಿ, ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರ ಜಮೀನಿಗೆ ಮೊದಲು 2 ಕೋಟಿ ರೂ. ಕೊಡುತ್ತೇವೆ ಎಂದವರು ಈಗ 3 ಕೋಟಿ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ. ಏನು ವ್ಯಾಪಾರ ಮಾಡುತ್ತಿದ್ದೀರಾ? ರೈತರ ಭೂಮಿಯನ್ನು ಪೊಲೀಸ್ ಬಲ ಬಳಸಿ ವಶಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. 2006ರಲ್ಲಿ 2,600 ಎಕರೆ ಸರ್ಕಾರಿ ಜಮೀನು ಇತ್ತು. ಅದು ಈಗ ಎಲ್ಲಿಗೆ ಹೋಯಿತು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಅನಾರೋಗ್ಯ ವದಂತಿ; ಮೊಜ್ತಬಾ ಖಮೇನಿ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸಿರುವುದನ್ನೂ ಪ್ರಶ್ನಿಸಿ, 2006ರಲ್ಲೂ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಏನು ವರದಿ ನೀಡಿತ್ತು ಎಂದು ಪ್ರಶ್ನಿಸಿದರು.
ಸಚಿವ ಹೆಚ್.ಸಿ. ಬಾಲಕೃಷ್ಣ ವಿರುದ್ಧವೂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. “ಬಾಲಕೃಷ್ಣ ನನ್ನ ಹಳೆಯ ಮಿತ್ರ ಎಂದು ಹೇಳಲ್ಲ” ಎಂದು ವ್ಯಂಗ್ಯವಾಡಿದ ಅವರು, ಬಾಲಕೃಷ್ಣ ಅವರು ಜೆಡಿಎಸ್‌ನಲ್ಲಿ ಮೂರು ಬಾರಿ, ಬಿಜೆಪಿಯಲ್ಲಿ ಒಂದು ಬಾರಿ ಹಾಗೂ ಕಾಂಗ್ರೆಸ್‌ನಲ್ಲಿ ಒಂದು ಬಾರಿ ಗೆದ್ದಿದ್ದಾರೆ. ಈಗ ಬಿಜೆಪಿ-ಜೆಡಿಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಯೋಜನೆಗೆ ಕೆಲ ದಲ್ಲಾಳಿಗಳು ಮಾತ್ರ ಒಪ್ಪಿ ಜಮೀನು ನೀಡುತ್ತಿದ್ದಾರೆ. ಆದರೆ ಪಿತ್ರಾರ್ಜಿತ ಆಸ್ತಿ ಹೊಂದಿರುವ ರೈತರು ಹಾಗೂ ಸ್ವಾಭಿಮಾನಿ ರೈತ ಮಹಿಳೆಯರು ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೈತರು ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಕುಮಾರಸ್ವಾಮಿ ಹೇಳಿದರು.
ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಿಸುವ ವಿಚಾರದಲ್ಲೂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಹೈಕೋರ್ಟ್ ತೀರ್ಪನ್ನು ಅನುಸರಿಸಿ, ಜನರು ಕಾನೂನುಬಾಹಿರವಾಗಿ ಟೋಲ್ ಹಣ ಕಟ್ಟಬಾರದು ಎಂದು ಅವರು ಹೇಳಿದರು. ಇದನ್ನೂ ಓದಿ:ಪಾಕ್‌ನ ಅಪರಿಚಿತ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ್ದ ಲಷ್ಕರ್ ಕಮಾಂಡರ್ ಸಾವು
ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ಸ್ವರೂಪ್ ಪ್ರಕಾಶ್, ಹರೀಶ್ ಗೌಡ, ಹೆಚ್.ಟಿ. ಮಂಜು, ಶಾರದಾ ಪೂರ್ಯನಾಯ್ಕ್, ಕರೆಮ್ಮ ನಾಯಕ್, ಶರಣಗೌಡ ಕಂದಕೂರು ಸೇರಿದಂತೆ ಹಲವು ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.



