BelgaumBengaluru CityDistrictsKarnatakaLatestLeading NewsMain Post

6 ಪಕ್ಷ, 8 ಬಾರಿ ಶಾಸಕ – ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಸಿಎಂ ಕನಸು ಕಂಡಿದ್ದ ಕತ್ತಿ

ಬೆಳಗಾವಿ/ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅರಣ್ಯ ಸಚಿವ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಮತ್ತು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿ ಇರುತ್ತಿದ್ದ ಸಚಿವ ಉಮೇಶ ಕತ್ತಿ(Umesh Katti) ನಿಧನರಾಗಿದ್ದಾರೆ.

ಇಲ್ಲಿಯವರೆಗೆ 9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ ನಾಲ್ಕನೇ ಬಾರಿಗೆ ಸಚಿವರಾಗಿದ್ದರು. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ಆರು ಪಕ್ಷಗಳನ್ನು ಬದಲಿಸಿಯೂ ಶಾಸಕರಾಗಿ ಆಯ್ಕೆ ಆಗುತ್ತಿದ್ದರು.

ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿದ್ದ ಕತ್ತಿ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. 1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಇದನ್ನೂ ಓದಿ: ಕೆಲಸ ಮಾಡದೇ ಹೋದ್ರೆ ಬೂಟಿಂದ ಹೊಡಿತೀನಿ -ಕತ್ತಿ

1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆದ್ದರು. 2004ರಲ್ಲಿ ಕಾಂಗ್ರೆಸ್‌ಗೆ ಬಂದ ಉಮೇಶ್ ಕತ್ತಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ರಾಜಕೀಯ ಜೀವನದಲ್ಲಿ ಇದೊಂದೇ ಚುನಾವಣೆಯಲ್ಲಿ ಉಮೇಶ್ ಕತ್ತಿ ಸೋಲು ಕಂಡಿರುವುದು.

2008ರಲ್ಲಿ ಜೆಡಿಎಸ್ ಸೇರಿ ಗೆಲುವು ಕಂಡರು. ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2013, 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಜಯ ಸಾಧಿಸಿದರು.

4 ಬಾರಿ ಸಚಿವ ಸ್ಥಾನ:
ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನದಿಂದಾಗಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು. 2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಿಕ್ಕಿತು. 2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದಾರೆ. ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರಾಗಿದ್ದಾರೆ.

Live Tv

Leave a Reply

Your email address will not be published.

Back to top button