ಬೆಳಗಾವಿ: ರಾಜ್ಯದಲ್ಲಿ ಮುಂಗಾರು (Mansoon) ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕದ (North Karnataka) ಹಲವೆಡೆ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಮುಂಗಾರ ಮಳೆ ಆರ್ಭಟ ಜೋರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲದ (Bailhongal) ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಂಗಳವಾರ (ಜೂ.10) ಸಂಜೆ ಸುರಿದ ಮಳೆಗೆ ರಸ್ತೆಗಳ ಮೇಲೆ ನದಿಯಂತೆ ನೀರು ಹರಿದಿದೆ. ಬೈಲಹೊಂಗಲ ನಗರದ ಕಲ್ಮಟ ಗಲ್ಲಿ, 16 ಗಡಗಡಿ ಭಾವಿ, ಬಾಗವಾನ್ ಚಾಳ, ಹುಡೇದ ಭಾವಿ ಏರಿಯಾ ಸುತ್ತಮುತ್ತ 19ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಇದನ್ನೂ ಓದಿ: ಅಂಕೋಲದ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ


ಇನ್ನೂ ಬೈಲಹೊಂಗಲದಲ್ಲಿ ಟೈಲರಿಂಗ್ ಅಂಗಡಿಗೆ ನೀರು ನುಗ್ಗಿದೆ. ಅಂಗಡಿಯಲ್ಲಿದ್ದ ಗ್ರಾಹಕರ ಬಟ್ಟೆಗಳು ನೀರಿನಲ್ಲಿ ತೇಲಿ ಹೋಗಿವೆ ಎಂದು ಅಂಗಡಿ ಮಾಲೀಕ ಅಳಲು ತೋಡಿಕೊಂಡಿದ್ದಾರೆ. ಇತ್ತ ಸವದತ್ತಿ ನಗರದಲ್ಲಿ ರಸ್ತೆಗೆ ನೀರು ನುಗ್ಗಿ ಆಟೋರಿಕ್ಷಾ, ಮೋಟರ್ ಸೈಕಲ್ ನೀರಿನಲ್ಲಿ ಕೊಚ್ಚಿಹೋಗಿದ್ದು, ಬೆಳಗಾವಿ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದೆ.

ಬೈಲಹೊಂಗಲದಲ್ಲಿ ಭಾರೀ ಮಳೆಯಿಂದ ಅನಾಹುತ ಸೃಷ್ಟಿಯಾಗಿದ್ದನ್ನು ಖಂಡಿಸಿ ಜೆಡಿಎಸ್ ಮುಖಂಡ ಶಂಕರ ಮಾಡಲಗಿ ನೇತೃತ್ವದಲ್ಲಿ ಹೋರಾಟ ನಡೆಸಲಾಯ್ತು. ಬೈಲಹೊಂಗಲ ನಗರಸಭೆ ಕಚೇರಿ ಬಳಿ ಜ್ಯೋತಿ ಕಾಂಬ್ಳೆ ಎಂಬ ಮಹಿಳೆ ಅನಾಹುತಕ್ಕೆ ಕಣ್ಣೀರಿಟ್ಟಿದ್ದಾರೆ. ಇನ್ನೂ ಧಾರಾಕಾರ ಮಳೆಗೆ ಗರಜೂರ-ಸಂಗೋಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೂಡ ಜಲಾವೃತಗೊಂಡಿದೆ.

ವಿಜಯಪುರ ನಗರದಲ್ಲಿ ವರುಣಾರ್ಭಟ:
ಇನ್ನೂ ವಿಜಯಪುರ (Vijayapura) ನಗರದ ಹಲವು ಕಡೆ ಅಬ್ಬರದ ಮಳೆಯಾಗಿದೆ. ಮಳೆಯಿಂದಾಗಿ ಆಝಾದ್ ರಸ್ತೆಯಲ್ಲಿ ಡ್ರೈನೇಜ್ ಚೇಂಬರ್‌ನಿಂದ ಬುಗ್ಗೆಯಂತೆ ಚರಂಡಿ ನೀರು ಹೊರಚಿಮ್ಮುತ್ತಿದೆ. ಒಳಚಂಡಿ ಬ್ಲಾಕ್ ಆಗಿ ಮಳೆ ನೀರಿನೊಂದಿಗೆ ರಸ್ತೆಗೆ ಚರಂಡಿ ನೀರು ಹರಿಯುತ್ತಿದೆ. ಮಳೆಯಿಂದಾಗಿ ನಗರದ ಹಲವು ಕಡೆ ಸಂಚಾರ ಅಸ್ತವ್ಯಸ್ಥವಾಗಿದೆ.ಇದನ್ನೂ ಓದಿ: ಐಟಿ ವಲಯದಲ್ಲಿ ಕ್ರೇಜ್ ಹೆಚ್ಚಿಸಿದ ಕರಿಕಾಡ ಹುಡುಗ ನಟರಾಜ್
