ಮೈಸೂರು: ತಮಿಳುನಾಡಿನ (Tamil Nadu) ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ(J Jayalalitha) ಅವರ ಸಹೋದರ ಎನ್.ಜೆ. ವಾಸುದೇವನ್ (92) ಅವರು ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.
ಮೈಸೂರು ಜಿಲ್ಲೆಯ ಬನ್ನೂರು ಪಟ್ಟಣದ ಸಮೀಪವಿರುವ ಚಾಮನಹಳ್ಳಿಯಲ್ಲಿರುವ ತಮ್ಮ ಸಾಕು ಮಗಳ ಮನೆಯಲ್ಲಿ ವಾಸುದೇವನ್ (NJ Vasudevan) ಅವರು ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಜಯಲಲಿತಾ ಅವರ ಕುಟುಂಬದ ಹಿರಿಯ ಸದಸ್ಯರಾಗಿದ್ದ ವಾಸುದೇವನ್ ಅವರ ನಿಧನಕ್ಕೆ ಆಪ್ತರು ಮತ್ತು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಜೂ.5 ರಂದು ಮುಂಗಾರು ಪ್ರವೇಶ – ಹಲವೆಡೆ ಇಂದಿನಿಂದ ಐದು ದಿನ ಮಳೆ ಮುನ್ಸೂಚನೆ

ಸಂಬಂಧ ಹೇಗೆ?
ಜಯಲಲಿತಾ ಅವರ ತಂದೆ ಜಯರಾಮ್ ಅವರ ಮೊದಲ ಪತ್ನಿ ಎಲ್.ಕೆ. ಜಯಮ್ಮಾಳ್. ಈ ದಂಪತಿಯ ಏಕೈಕ ಪುತ್ರ ಎನ್.ಜೆ. ವಾಸುದೇವನ್. ಜಯರಾಮ್ ಅವರ ಎರಡನೇ ಪತ್ನಿ ವೇದವಲ್ಲಿ (ಸಂಧ್ಯಾ)ಇವರ ಮಗಳೇ ಜೆ. ಜಯಲಲಿತಾ. ಈ ಮೂಲಕ ವಾಸುದೇವನ್ ಅವರು ಜಯಲಲಿತಾ ಅವರಿಗೆ ತಂದೆಯ ಕಡೆಯಿಂದ ಅಣ್ಣ ಆಗಿದ್ದರು.
ಜಯಲಲಿತಾ ಅವರು ಬದುಕಿದ್ದಾಗ ವಾಸುದೇವನ್ ಅವರೊಂದಿಗೆ ಯಾವುದೇ ಸಾರ್ವಜನಿಕ ಅಥವಾ ಕುಟುಂಬದ ನಿಕಟ ಸಂಬಂಧವನ್ನು ಹೊಂದಿರಲಿಲ್ಲ. ಜಯಲಲಿತಾ ಅವರ ನಿಧನದ ನಂತರ, ವಾಸುದೇವನ್ ಅವರು ತಾವೂ ಕೂಡ ಜಯಲಲಿತಾ ಅವರ ನೇರ ರಕ್ತಸಂಬಂಧಿ ಎಂದು ಹೇಳಿ ಅವರ ಆಸ್ತಿಯಲ್ಲಿ 50% ರಷ್ಟು ಪಾಲನ್ನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಜಯಲಲಿತಾ ಅವರ ಒಡಹುಟ್ಟಿದ ಸಹೋದರನ ಮಕ್ಕಳಾದ ಜೆ. ದೀಪಾ ಮತ್ತು ಜೆ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಘೋಷಿಸಿರುವುದನ್ನು ಅವರು ಪ್ರಶ್ನಿಸಿದ್ದರು.
