ಬೆಂಗಳೂರು: ಮೇಲ್ಮನೆ ಚುನಾವಣೆಯಲ್ಲಿ ಅಡ್ಡ ಮತದಾನದಿಂದ ತೀವ್ರ ಮುಜುಗರಕ್ಕೆ ಒಳಗಾಗಿರೋ ರಾಜ್ಯ ಬಿಜೆಪಿ (BJP) ನಾಯಕರು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ, ಒಂದೂವರೆ ಗಂಟೆ ರಾಜ್ಯನಾಯಕರನ್ನು ಕಾಯಿಸಿದ ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ (Nitin Nabin), ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ನಾಯಕರ ನಿರ್ಲಕ್ಷ್ಯದಿಂದಲೇ ಅಡ್ಡ ಮತದಾನವಾಗಿದ್ದು, ಯಾರನ್ನೂ ಬಿಡಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ, ಆಗಿರೋ ತಪ್ಪನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅಶೋಕ್ ಒಪ್ಪಿಕೊಂಡಿದ್ದಾರೆ. 4 ರಿಂದ 7 ಶಾಸಕರು ಅಡ್ಡ ಮತದಾನ ಮಾಡಿರೋ ಸಾಧ್ಯತೆಗಳಿದ್ದು, 9 ಸಂಶಯಾಸ್ಪದ ಶಾಸಕರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಸತ್ಯಶೋಧನಾ ಸಮಿತಿಯ ವರದಿ ಬರಲಿ. ಮುಂದೆ ನಾವು ತೀರ್ಮಾನ ಮಾಡ್ತೇವೆ ಅಂತ ರಾಜ್ಯ ಬಿಜೆಪಿ ನಾಯಕರಿಗೆ ಹೇಳಿ ಕಳುಹಿಸಿದ್ದಾರೆ.
ಧರ್ಮಸ್ಥಳದಲ್ಲಿನ ಆಣೆ ಪ್ರಮಾಣಕ್ಕೆ ಹೈಕಮಾಂಡ್ ಗರಂ ಆಗಿದೆ. ನಿಮ್ಮ ತಪ್ಪಿಂದ ಅಡ್ಡಮತದಾನವಾಗಿದ್ದು, ಧರ್ಮಸ್ಥಳವನ್ನು ಎಳೆದು ತರೋದು ಬೇಡ ಅಂತ ಸಿಟ್ಟಾಗಿದ್ದಾರೆ. ಹೈಕಮಾಂಡ್ ವಾರ್ನಿಂಗ್ ಬಳಿಕ ಆಣೆ ಪ್ರಮಾಣ ನಿರ್ಧಾರದಿಂದ ರಾಜ್ಯ ನಾಯಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ, ಸಿ.ಟಿ.ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಎಲ್ಲ ಶಾಸಕರ ಬಳಿ ಮಾಹಿತಿ ಸಂಗ್ರಹಿಸಿದ್ದು, ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ನೀಡೋ ಸಾಧ್ಯತೆಗಳಿವೆ.
ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ವರದಿ
4ರಿಂದ 7 ಶಾಸಕರಿಂದ ಅಡ್ಡ ಮತದಾನ ಮಾಡಿರುವ ಸಾಧ್ಯತೆ ಇದೆ. ಜೆಡಿಎಸ್ ಬಳಿ ನಂಬರ್ ಇರಲಿಲ್ಲ, ಎಲೆಕ್ಷನ್ ಬೇಕಿರಲಿಲ್ಲ. ಸುಮ್ಮನೆ ಚುನಾವಣೆ ಎದುರಿಸುವಂತಾಯ್ತು. ನಾವು ರೆಸಾರ್ಟ್ಗೆ ಹೋಗಲು ಸಿದ್ಧರಿದ್ವಿ. ಕೆಲ ಹಿರಿಯ ಶಾಸಕರು ಬೇಡ ಅಂತ ಹೇಳಿದ್ರು. ನಾವು ಮೈ ಮರೆಯಲಿಲ್ಲ. ಶಾಸಕಾಂಗ ಪಕ್ಷದ ಸಭೆ ನಡೆಸಿದ್ವಿ. ಕೆಲವರ ನಡೆ ಅರಿಯಲು ಆಗಲಿಲ್ಲ. ಅಲ್ಲಿಯೂ ಅಡ್ಡ ಮತದಾನ. ನಮ್ಮಲ್ಲೂ ಅಡ್ಡ ಮತದಾನವಾಗಿದೆ. ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ನಾಯಕರು ವರದಿ ನೀಡಿದ್ದಾರೆ.
ರಾಜ್ಯ ನಾಯಕರಿಗೆ ಹೈಕಮಾಂಡ್ ತರಾಟೆ
ಮೇಲ್ಮನೆ ಚುನಾವಣೆಯನ್ನು ನೀವು ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ 5ನೇ ಅಭ್ಯರ್ಥಿ ಹಾಕಿದ್ದರೂ ನಿಮ್ಮಿಂದ ನಿರ್ಲಕ್ಷö್ಯ ಆಗಿದೆ. ಮೈತ್ರಿ ಅಭ್ಯರ್ಥಿ ಸೋತರೇನಂತೆ ಎಂಬಂತೆ ವರ್ತಿಸಿದ್ದೀರಿ. ರಾಷ್ಟ್ರಮಟ್ಟದಲ್ಲಿ ನಾವು ಎಲ್ಲ ಕಡೆ ಗೆಲ್ಲುತ್ತಿದ್ದೇವೆ. ಕರ್ನಾಟಕದ ಈ ಸೋಲು ತೀವ್ರ ಮುಜುಗರ ತಂದಿದೆ. ಮೈತ್ರಿಯಲ್ಲೂ ಸಮನ್ವಯತೆ ಕಾಣಿಸುತ್ತಿಲ್ಲ. ನಿಮ್ಮ ನಿರ್ಲಕ್ಷ್ಯದಿಂದಲೇ ಈ ಸ್ಥಿತಿ ಬಂದಿದೆ. ಮುಂದೆ ಇಂತಹ ಪ್ರಮಾದವಾಗದಂತೆ ಎಚ್ಚರಿಕೆ ವಹಿಸಿ. ವರದಿ ಬರಲಿ… ಆಮೇಲೆ ನಾವೇ ತೀರ್ಮಾನಿಸುತ್ತೇವೆ ಎಂದ ನಬಿನ್ ತಿಳಿಸಿದ್ದಾರೆ.
