ಕಾರವಾರ: ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಗೋವಾದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಎಂದರೆ ಜಂಪಿಂಗ್ ಚಿಕನ್‌ಗೆ (Jumping Chicken) ಎಲ್ಲಿಲ್ಲದ ಬೇಡಿಕೆ. ನಿಷೇಧದ ನಡುವೆ ಇವುಗಳ ಪೂರೈಕೆ ಮಾತ್ರ ಕಾರವಾರದಿಂದ ಆಗುತ್ತಿದೆ. ಅರೇ! ಇದೇನಿದು ಜಂಪಿಂಗ್ ಚಿಕನ್? ಹೊಸದಾಗಿ ಕೇಳ್ತಾ ಇದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಚಿಕನ್ ಏನಾದ್ರು ಜಂಪ್ ಮಾಡುತ್ತಾ ಎಂದು ನೀವು ತಮಾಷೆ ಮಾಡಬಹುದು.
ಹೌದು, ‘ಜಂಪಿಂಗ್ ಚಿಕನ್’ ಎಂದರೆ ಕಪ್ಪೆ ಮಾಂಸ ಎಂದರ್ಥ. ಕಪ್ಪೆ ಚಿಕ್ಕದಾಗಿರುತ್ತೆ. ಅದು ಹೇಗೆ ಚಿಕನ್‌ಗೆ ಸಮ ಎನ್ನಬಹುದು. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಅಂದ್ರೆ ‘ಇಂಡಿಯನ್ ಬುಲ್ ಫ್ರಾಗ್’ (Indian Bull Frogs) ತಳಿಯ ಬೃಹದಾಕಾರದ ಕಪ್ಪೆಗಳು ಸಂತಾನೋತ್ಪತ್ತಿಗೆ ತನ್ನ ಆವಾಸ ಸ್ಥಾನ ಬಿಟ್ಟು ಹೊರಬರುತ್ತವೆ. ಇವು ಗಾತ್ರದಲ್ಲಿ ದೊಡ್ಡದಿದ್ದು, ಏಳರಿಂದ ಎಂಟು ಕೆಜಿ ವರೆಗೂ ತೂಗುತ್ತವೆ. ಒಂದು ಚಿಕ್ಕ ಕೋಳಿಗೆ ಸಮವಿರುತ್ತವೆ. ಈ ಕಪ್ಪೆಗಳನ್ನ ಜೀವಂತ ಹಿಡಿದು ಗೋವಾದಲ್ಲಿ ಮಾಂಸಕ್ಕಾಗಿ ಬಳಸುತ್ತಾರೆ. ಇದನ್ನೂ ಓದಿ: 2,000 ಕೋಟಿ ವೆಚ್ಚದಲ್ಲಿ ಬೆಂಗ್ಳೂರಿನ ರಸ್ತೆಗಳ ಮರುಡಾಂಬರೀಕರಣಕ್ಕೆ ಚಾಲನೆ – ಕೃಷ್ಣ ಬೈರೇಗೌಡ
ಕಪ್ಪೆ ಮಾಂಸ ಹೇಗೆ ಬಳಕೆ?
ದೊಡ್ಡ ದೊಡ್ಡ ಕಪ್ಪೆಗಳನ್ನ ಜೀವಂತ ಹಿಡಿಯಲಾಗುತ್ತದೆ. ಇವುಗಳನ್ನ ಜೀವಂತವಾಗಿ ಹಿಡಿದು ದೊಡ್ಡ ದೊಡ್ಡ ಹೋಟಲ್‌ಗಳಿಗೆ ಸಾವಿರಾರು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿ ಈ ಕಪ್ಪೆಗಳನ್ನ ಜೀವಂತವಾಗಿಯೇ ಬೇಯಿಸಲಾಗುತ್ತದೆ. ನಂತರ ಇವುಗಳ ಕಾಲುಗಳನ್ನ ತುಂಡರಿಸಿ ಕಬಾಬ್ ರೂಪದಲ್ಲಿ ಭಕ್ಷಿಸಲಾಗುತ್ತದೆ. ರುಚಿಯಲ್ಲಿ ಚಿಕನ್‌ನಂತೆ ಇರುವುದರಿಂದ ಇದಕ್ಕೆ ಜಂಪಿಂಗ್ ಚಿಕನ್ ಎಂಬ ಹೆಸರು ಬಂದಿದೆ. ಗೋವಾದಲ್ಲಿ ಈ ಕಪ್ಪೆ ಮಾಂಸಕ್ಕೆ ಬಲು ಬೇಡಿಕೆ ಇದ್ದು, ಸಾವಿರಾರು ರೂಪಾಯಿ ನೀಡಿ ಈ ಖಾದ್ಯವನ್ನ ಗ್ರಾಹಕರು ಖರೀದಿಸುತ್ತಾರೆ.

ಕಾರವಾರವೇ ಮಾರುಕಟ್ಟೆ
‘ಇಂಡಿಯನ್ ಬುಲ್ ಫ್ರಾಗ್’ ತಳಿಯ ಬೃಹದಾಕಾರದ ಕಪ್ಪೆಗಳು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ. ಮಳೆಗಾಲ ಪ್ರಾರಂಭವಾದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಭಟ್ಕಳ ಸೇರಿದಂತೆ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಕಾಣಸಿಗುತ್ತವೆ.
ಇವುಗಳು ಗಾತ್ರದಲ್ಲಿ ದೊಡ್ಡದಿರುವುದರಿಂದ ಬೇಟೆಗಾರರಿಗೆ ಬಲು ಬೇಗ ಜೀವಂತವಾಗಿಯೇ ಸಿಗುತ್ತವೆ. ಇನ್ನು ಇವುಗಳು ಹೆಚ್ಚಾಗಿ ಗೋವಾ ಗಡಿಯ ಕಾರವಾರದಲ್ಲಿ ಕಾಣಸಿಗುವುದರಿಂದ ಅಕ್ರಮ ಸಾಗಾಟದಾರರಿಗೆ ಕಾರವಾರವೇ ಮಾರುಕಟ್ಟೆಯಾಗಿದೆ. ಇದನ್ನೂ ಓದಿ: ಟೋಲ್ ವಿರೋಧಿಸಿ ಜೂ.23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ
ಕಾರವಾರದಲ್ಲಿ ಈ ಕಪ್ಪೆಗಳನ್ನ ಜೀವಂತ ಸಂಗ್ರಹಿಸಿ ಪಕ್ಕದಲ್ಲೇ ಇರುವ ಗೋವಾಕ್ಕೆ ಸಲೀಸಾಗಿ ಸಾಗಾಟ ಮಾಡಿ ಬೇಡಿಕೆ ಇರುವ ಹೋಟಲ್‌ಗೆ ಪೂರೈಕೆ ಮಾಡುತ್ತಾರೆ. ಕಳೆದ ವರ್ಷ ನೂರಾರು ಕಪ್ಪೆಗಳನ್ನ ಗಡಿಯಲ್ಲಿ ಹಿಡಿದು ರಕ್ಷಣೆ ಮಾಡಲಾಗಿತ್ತು. ಆದರೆ, ಈ ವರ್ಷ ಕಪ್ಪೆ ಸಾಗಾಟದಾರರು ಯಾವುದೇ ಅಳುಕಿಲ್ಲದೇ ಕಪ್ಪೆಗಳನ್ನು ಸಂಗ್ರಹಿಸಿ ಇವುಗಳ ಸಾಗಾಟ ಮಾಡುತ್ತಿದ್ದು, ದೊಡ್ಡ ದೊಡ್ಡ ಹೋಟಲ್‌ಗೆ ಸಪ್ಲೆ ಮಾಡುತಿದ್ದಾರೆ.
ಕಪ್ಪೆ ಬೇಟೆಗೆ ಇದೆ ನಿರ್ಬಂಧ
ಅಳಿವಿನ ಅಂಚಿನಲ್ಲಿರುವ ಇಂಡಿಯನ್ ಬುಲ್ ಫ್ರಾಗ್ ಕಪ್ಪೆಗಳ ಬೇಟೆಗೆ ಕರ್ನಾಟಕ, ಗೋವಾದಲ್ಲಿ ನಿಷೇಧವಿದೆ. ಕರ್ನಾಟಕದಲ್ಲಿ ಕಪ್ಪೆ ಬೇಟೆ, ಅದರ ಮಾಂಸ ಭಕ್ಷಣೆಗೆ ಮೂರು ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ, ಈ ಕಪ್ಪೆಗಳ ರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಮುತುವರ್ಜಿ ವಹಿಸದ ಕಾರಣ ಕಾರವಾರದಿಂದ ಗೋವಾ ಗಡಿಗೆ ಸಲೀಸಾಗಿ ಸಾಗಾಟ ಆಗುತ್ತಿದೆ.
ಕಪ್ಪೆಗಳು ನಿಸರ್ಗದ ವೈದ್ಯ
ಈ ಕಪ್ಪೆಗಳು ಸೊಳ್ಳೆಗಳು, ಅವುಗಳ ಲಾರ್ವವನ್ನ ಭಕ್ಷಿಸುತ್ತವೆ. ಇದರ ಜೊತೆಗೆ ಕೀಟಗಳನ್ನ ಸಹ ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳಿಂದ ಬರುವ ರೋಗಗಳನ್ನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ಸೊಳ್ಳೆ ಜೊತೆಗೆ ಭತ್ತ ಸೇರಿದಂತೆ ಇತರೆ ಬೆಳೆಗೆ ದಾಳಿ ಮಾಡುವ ಕೀಟಗಳನ್ನ ಸಹ ಭಕ್ಷಿಸುತ್ತವೆ. ಹೀಗಾಗಿ, ನಿಸರ್ಗಕ್ಕೆ ಇವುಗಳ ಕಾಣಿಕೆ ದೊಡ್ಡದು. ಆದರೆ, ಇದೀಗ ಈ ಕಪ್ಪೆಗಳ ಭಕ್ಷಣೆ ಹೆಚ್ಚಾಗುತ್ತಿದ್ದು, ಅಳಿವಿನಂಚಿನತ್ತ ಸಾಗಿದೆ.
