ಶಿವಮೊಗ್ಗ: ಪಶು ವೈದ್ಯೆ ಡಾ. ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿ (Hippopotamus Hamsini) ಬಹು ಅಂಗಾಂಗ ಸೋಂಕಿನಿಂದ ಮೃತಪಟ್ಟಿದೆ.
ನೀರಾನೆ ಹಂಸಿಣಿ ಸಾವಿಗೀಡಾಗಿದೆ. ಇತ್ತೀಚೆಗೆ ನೀರಾನೆ ಹೊಟ್ಟೆಯಲ್ಲಿ ಭ್ರೂಣ ಮೃತಪಟ್ಟು, ದೇಹಕ್ಕೆ ಸೋಂಕು ವ್ಯಾಪಿಸಿತ್ತು. ಗರ್ಭಾಶಯದ ಸೋಂಕು ನೀರಾನೆ ದೇಹಕ್ಕೆ ಪೂರ್ತಿ ಹರಡಿದ್ದ ಹಿನ್ನೆಲೆ ಚಿಕಿತ್ಸೆ ಫಲಿಸದೇ ಮೃಗಾಲಯದಲ್ಲಿ ಸಾವನ್ನಪ್ಪಿದೆ. ಇದನ್ನೂ ಓದಿ: ಪಶುವೈದ್ಯೆ ಕೊಂದಿದ್ದ ನೀರಾನೆಗೆ ಬಹು ಅಂಗಾಂಗ ವೈಫಲ್ಯ – ಮರಿ ಗರ್ಭದಲ್ಲೇ ಸಾವು
ನಿನ್ನೆಯಿಂದಲೇ ಚಿಕಿತ್ಸೆಗೆ ಸಹಕರಿಸದೇ ನೀರಾನೆ ಮೆಡಿಸಿನ್ ಸಹ ತ್ಯಜಿಸಿತ್ತು. ವೈದ್ಯರ ತಂಡವು ಡಾರ್ಟಿಂಗ್ ಮತ್ತು ಪೋಲ್ ಸಿರಿಂಜ್ ಮೂಲಕ ಮೆಡಿಸಿನ್ ನೀಡುತ್ತಿತ್ತು. ಬನ್ನೇರುಘಟ್ಟ & ಮೈಸೂರಿನ ತಜ್ಞ ವೈದ್ಯರ ಶ್ರಮದ ನಡುವೆಯೂ ನೀರಾನೆ ಮೃತಪಟ್ಟಿದೆ. ನೀರಾನೆಯ ರಕ್ತ, ಸಗಣಿ, ಬ್ಲಡ್ ಕ್ಲಾಟ್ಸ್ ಸ್ಯಾಂಪಲ್ ಸಂಗ್ರಹಿಸಿ ವೈದ್ಯರು ಪರೀಕ್ಷಿಸಿದ್ದರು.
ಕಳೆದ ಮಾ.18 ರಿಂದಲೇ ನೀರಾನೆ ಆಹಾರ ತ್ಯಜಿಸಿತ್ತು. ಮಾ.19 ರಂದು ಡಾ. ಸಮೀಕ್ಷಾ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಫಲಿಸದೇ ಮಾ.20 ರಂದು ಬೆಂಗಳೂರಿನ ಸಕಲವಾರ ಮೂಲದ ಡಾ. ಸಮೀಕ್ಷಾ ಮೃತಪಟ್ಟಿದ್ದರು. ಪಶುವೈದ್ಯೆ ಮೇಲೆ ದಾಳಿ ಮಾಡಿದ 25ನೇ ದಿನದಲ್ಲೇ ನೀರಾನೆ ಹಂಸಿಣಿ ಕೂಡ ಸಾವಿಗೀಡಾಗಿದೆ. ಇದನ್ನೂ ಓದಿ: ಬನ್ನೇರುಘಟ್ಟದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು
ನೀರಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಮೃಗಾಲಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಿದ್ದಾರೆ. ನೀರಾನೆ ಶವ ಪರೀಕ್ಷೆಗೆ ಬೆಂಗಳೂರಿನಿಂದ ವನ್ಯಜೀವಿ ವೈದ್ಯರ ತಂಡ ಆಗಮಿಸುತ್ತಿದೆ. ವನ್ಯಜೀವಿ ವೈದ್ಯರ ತಂಡ ಹಾಗೂ ಶಿವಮೊಗ್ಗ ಪಶು ವಿಶ್ವವಿದ್ಯಾಲಯ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ.
