ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಳೆರಾಯ (Rain) ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆ ಜಿಟಿಜಿಟಿಯಾಗಿ ಆರಂಭವಾದ ಮಳೆ ನೋಡನೋಡುತ್ತಿದ್ದಂತೆ ಜೋರು ಗಾಳಿ ಸಹಿತ ಅಬ್ಬರದ ಮಳೆಯಾಗಿದೆ.
ಟೌನ್ ಹಾಲ್, ಮೆಜೆಸ್ಟಿಕ್, ಮಾರ್ಕೆಟ್, ವಿಧಾನಸೌಧ ಸುತ್ತಮುತ್ತ ಭಾರಿ ಮಳೆಯಾಗಿ ವಾಹನ ಸವಾರರು ಪರದಾಡಿದ್ದಾರೆ. ಇನ್ನು ಗಾಳಿ ಸಹಿತ ಮಳೆಗೆ ನಮ್ಮ ಮೆಟ್ರೋ ಹಳಿ ಮೇಲೆ ಮರದ ಕೊಂಬೆಯೊಂದು ಬಿದ್ದಿದೆ. ಇದರ ಪರಿಣಾಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಐಟಿಪಿಎಲ್ ಮತ್ತು ಸತ್ಯಸಾಯಿ ಪ್ರಶಾಂತ್ ನಿಲಯಂ ನಡುವೆ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಹಿನ್ನೆಲೆ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಕೆಲಕಾಲ ಪ್ರಯಾಣಿಕರು ಪರದಾಡಿದರು. ಇದನ್ನೂ ಓದಿ: ಯೋಗಾಸನವನ್ನು ಒಲಿಂಪಿಕ್‌ಗೆ ಸೇರಿಸಬೇಕು: ಕ್ರೀಡಾ ಸಚಿವ ಒತ್ತಾಯ
ಡಿವೈಡರ್ ಕಾಣದೇ ಕಾರು ಹತ್ತಿಸಿದ ಚಾಲಕ:
ಜೋರಾಗಿ ಸುರಿದ ಮಳೆಯಿಂದಾಗಿ ಡಿವೈಡರ್ ಕಾಣದೇ ಡಿವೈಡರ್ ಮೇಲೆಯೇ ಚಾಲಕನೋರ್ವ ಕಾರು ಹತ್ತಿಸಿದ್ದಾನೆ. ಪೂರ್ಣಿಮಾ ಥಿಯೆಟರ್ ಬಳಿ ರಸ್ತೆ ಕಾಣದೇ ಡಿವೈಡರ್ ಮೇಲೆ ಚಾಲಕ ಕಾರು ಹತ್ತಿಸಿದ್ದ. ಡಿವೈಡರ್‌ನಿಂದ ಕಾರು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಭರ್ಜರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಕೆರೆಯಂತಾಗಿದೆ. ನಗರದ ಹಲವೆಡೆ ಧಾರಾಕಾರ ಮಳೆಗೆ ವಾಹನ ಸವಾರರ ಪರದಾಡಿದ್ದಾರೆ. ದ್ವಿಚಕ್ರ ವಾಹನ ಸವಾರರು, ಆಟೋ ಸವಾರರು ಅಕ್ಷರಶಃ ನಲುಗಿ ಹೋದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಬಿಗ್ ಆಫರ್ ನೀಡಿದ ಹೈಕಮಾಂಡ್ – ಮತ್ತಷ್ಟು ಕಾಲಾವಕಾಶ ಕೇಳಿದ ಸಿಎಂ
ಇತ್ತ ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ ಬಾಣಾವರ ಭಾಗದಲ್ಲಿ ಮಳೆಯಾಗಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು. ಅತ್ತ ಶಿವಾನಂದ ಸರ್ಕಲ್ ಬಳಿಯ ಬೆಂಗಳೂರು ಕೆಫೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇನ್ನು ಮೂರು ಗಂಟೆಗಳ ಕಾಲ ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಬಕ್ರೀದ್‌ಗೆ ಪ್ರಾಣಿಬಲಿ: ಮುಂಬೈ ಮೀರಾ ರೋಡ್‌ನಲ್ಲಿ ಹಿಂದೂ – ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ
