ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆ ಮುಂದೂಡುವಂತೆ ಕೋರಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಚುನಾವಣೆ ನಡೆಸಲು ಡಿಸೆಂಬರ್ ವರೆಗೆ ಅವಕಾಶ ಕೇಳಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ. ಈ ಅರ್ಜಿಯನ್ನ ಶುಕ್ರವಾರ (ಜು.17) ಕೋರ್ಟ್ ವಿಚಾರಣೆ ನಡೆಸಲಿದೆ.

ರಾಜ್ಯ ಸರ್ಕಾರವು ಚುನಾವಣೆ ವಿಳಂಬಗೊಳಿಸಲು ಯತ್ನಿಸುತ್ತಿದೆ ಎಂದು ಕಟುವಾಗಿ ಟೀಕಿಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್ 31 ರ ಒಳಗೆ ಜಿಬಿಎ ಅಡಿ ಬರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಮೇ 20 ರಂದೇ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ತ್ರಿಸದಸ್ಯ ಪೀಠ ಈ ನಿರ್ದೇಶನ ನೀಡಿತ್ತು.
ಈ ಪ್ರಕರಣವನ್ನು ನೋಡಿದರೆ ರಾಜ್ಯ ಸರ್ಕಾರವು ಪಾಲಿಕೆ ಚುನಾವಣೆ ಮುಂದೂಡಲು ಯತ್ನಿಸುತ್ತಿರುವಂತೆ ಕಾಣುತ್ತಿದೆ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಗಣಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸಲು ಕೊನೆಯ ಬಾರಿಗೆ ಆಗಸ್ಟ್ 31 ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಆದೇಶಿಸಿತ್ತು. ಇದೀಗ ಮತ್ತೆ ಜಿಬಿಎ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
