ಮಂಗಳೂರು: ಮಂಗಳೂರಿನ(Mangaluru robbery) ಬೈಕಂಪಾಡಿಯಲ್ಲಿ ಬೆಳ್ಳಂಬೆಳಗ್ಗೆ ಸಿನಿಮಾ ಶೈಲಿಯಲ್ಲಿ ದರೋಡೆ ನಡೆದಿದೆ. ಚಿನ್ನದ ವ್ಯಾಪಾರಿಯ ಕಾರನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿ, ಚಿನ್ನ ಮತ್ತು ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪಾಡಿ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕೇರಳದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್, ಕುಟುಂಬದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸ್ವಿಫ್ಟ್ ಕಾರಿನಲ್ಲಿ ಮರಳುತ್ತಿದ್ದರು.
ಉಡುಪಿ ಕಡೆಯಿಂದ ಮಂಗಳೂರು ಕಡೆ ಬರುತ್ತಿದ್ದ ವೇಳೆ, ಬೈಕಂಪಾಡಿ ದ್ವಾರದ ಬಳಿ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅವರ ಕಾರನ್ನು ಅಡ್ಡಗಟ್ಟಿತು. ಬಳಿಕ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಲಾಯಿತು. ನಂತರ ದರೋಡೆಕೋರರೊಬ್ಬನೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಆ ವೇಳೆ ಕಾರಿನಲ್ಲಿದ್ದ ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನೂ ಬೆದರಿಸಿ ಕಾರಿನಲ್ಲೇ ಕರೆದೊಯ್ಯಲಾಗಿದೆ.ಇದನ್ನೂ ಓದಿ: ಗೃಹಜ್ಯೋತಿಗೆ ಮತ್ತೆ ಅರ್ಜಿ ಸಲ್ಲಿಕೆ – ಸಿಎಂ ಡಿಕೆಶಿ ಘೋಷಣೆ
ನಂತರ ಕುಳೂರು ಸಮೀಪ ಇಬ್ಬರನ್ನೂ ಕಾರಿನಿಂದ ಇಳಿಸಿ, ಕಾರಿನಲ್ಲಿದ್ದ ಚಿನ್ನ ಮತ್ತು ನಗದಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ದೋಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ದರೋಡೆ ಪ್ರಕರಣದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ದುಷ್ಕರ್ಮಿಗಳು ಬಂದ ಎರಡು ಇನ್ನೋವಾ, ಒಂದು ಸ್ವಿಫ್ಟ್ ಕಾರು ಹಾಗೂ ವಿಕಾಸ್ ಅವರ ಕಾರಿನ ಚಲನವಲನ ದೃಶ್ಯಗಳಲ್ಲಿ ದಾಖಲಾಗಿದೆ. ಸಿಸಿಟಿವಿಯಲ್ಲಿ ಮೊದಲು ಇನ್ನೋವಾ ಕಾರು ವಿಕಾಸ್ ಅವರ ಕಾರಿನ ಮುಂದೆ ಬಂದು ಅಡ್ಡಗಟ್ಟಿರುವುದು ಕಾಣಿಸಿದೆ. ನಂತರ ವಿಕಾಸ್ ಅವರನ್ನು ಕೆಳಗಿಳಿಸಿ, ಅವರ ಕಾರನ್ನು ದುಷ್ಕರ್ಮಿಯೇ ಚಲಾಯಿಸಿಕೊಂಡು ಹೋಗಿರುವ ದೃಶ್ಯವೂ ಸೆರೆಯಾಗಿದೆ.
ಈ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪಣಂಬೂರು ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.ಇದನ್ನೂ ಓದಿ: ಡಿವೈಡರ್ ದಾಟಿ ಖಾಸಗಿ ಬಸ್‌ಗೆ ಲಾರಿ ಡಿಕ್ಕಿ – ನಾಲ್ವರು ಪ್ರಯಾಣಿಕರಿಗೆ ಗಾಯ
