– ದುರ್ಬಳಕೆಗೆ ಬ್ರೇಕ್: ಹೊರರಾಜ್ಯದವರಿಗಿಲ್ಲ ಉಚಿತ ವಿದ್ಯುತ್
– ಮನೆ ಬಾಗಿಲಿಗೆ ಬರಲಿದೆ ಹೊಸ ಅರ್ಜಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ (Gruha Jyothi Scheme) ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಪರಿಷ್ಕರಣೆಗೆ ಕೈ ಹಾಕಿದೆ. ಯೋಜನೆಯ ದುರ್ಬಳಕೆ ತಡೆಗಟ್ಟಲು ಮತ್ತು ಕೇವಲ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಹೊಸ ಅರ್ಜಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅಧಿಕೃತವಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟ’ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಸದ್ಯ ರಾಜ್ಯದಲ್ಲಿ ಸುಮಾರು 1.64 ಕೋಟಿ ಜನರಿಗೆ ಗೃಹಜ್ಯೋತಿ ಸೌಲಭ್ಯ ನೀಡಲಾಗುತ್ತಿದ್ದು, ಇದರಲ್ಲಿ ವ್ಯಾಪಕ ದುರ್ಬಳಕೆಯಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಗ್ಯಾರಂಟಿ ಯೋಜನೆಗೆ ಜರಡಿ ಹಿಡಿಯಲು ಸಜ್ಜಾಗಿದೆ.
ನಮ್ಮ ರಾಜ್ಯದ ಜನರಿಗೆ ಮಾತ್ರ ಈ ಸೌಲಭ್ಯ ಸಿಗಬೇಕು. ಬದುಕಲು ಬಂದಿರುವ ಹೊರರಾಜ್ಯದವರಿಗೆ ಅಥವಾ ಇಲ್ಲಿನ ಮತದಾರರಲ್ಲದವರಿಗೆ ಇನ್ನು ಮುಂದೆ ಗೃಹಜ್ಯೋತಿ ಸೌಲಭ್ಯ ಸಿಗುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಒಂದೇ ಹೆಸರಿನಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಕಡೆ ಡಬಲ್ ಗೃಹಜ್ಯೋತಿ ಸಂಪರ್ಕ ಹೊಂದಿದ್ದರೆ ಅದನ್ನು ತಕ್ಷಣವೇ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆ – ಭಾರತದ ಪರ ಬಿಹಾರ ರಾಜ್ಯಪಾಲ, ಕೇಂದ್ರ ಸಚಿವ ಪಬಿತ್ರಾ ಮಾರ್ಗರಿಟಾ ಭಾಗಿ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಅಸೋಸಿಯೇಷನ್‌ಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಇಂಧನ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರೊಂದಿಗೆ ಭಾಗವಹಿಸಿದೆ.
ರಾಜ್ಯದ ಅಭಿವೃದ್ಧಿಯಲ್ಲಿ ವಿದ್ಯುತ್ ವಲಯದ ಪಾತ್ರ ಮತ್ತು ನೌಕರರ ಶ್ರಮ ಅತ್ಯಂತ… pic.twitter.com/ZKuzfoTJ2B
— DK Shivakumar (@DKShivakumar) June 29, 2026
ಮನೆ ಬಾಗಿಲಿಗೆ ಅರ್ಜಿ
ಗೃಹಜ್ಯೋತಿ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಹೊಸ ಅರ್ಜಿಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ.
ಮನೆ ಮನೆಗೆ ತಲುಪಿಸುವ ಹೊಸ ಅರ್ಜಿಯಲ್ಲಿ ಸಾರ್ವಜನಿಕರ ಫೋಟೋ ಹಾಗೂ ಇತರೆ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಇಂಧನ ಇಲಾಖೆಯ ಸಿಬ್ಬಂದಿ ಖುದ್ದಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಅರ್ಹರಿಗೆ ಅನ್ಯಾಯವಾಗಬಾರದು ಎಂದು ಸಿಎಂ ತಿಳಿಸಿದರು.
ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪರಿಶೀಲನೆಗಾಗಿ ಪಂಚಾಯತಿ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ, ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಅರ್ಹತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರತ್ಯೇಕ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಇಲಾಖೆಯ ನೌಕರರ ಕೆಲಸವನ್ನು ಶ್ಲಾಘಿಸಿದ ಡಿಕೆಶಿ, ಕರೆಂಟ್ ಒಂದು ನಿಮಿಷ ಹೋದರೂ ಆ ‘ಡಿಕೆ ನನ್ಮಗ ಬಂದ, ಕರೆಂಟ್ ತೆಗೆದ’ ಎಂದು ಸಾರ್ವಜನಿಕರು ಬೈಯುತ್ತಾರೆ. ಆದರೆ ಇಲಾಖೆಯ ಸಿಬ್ಬಂದಿಯಾಗಿ ನೀವು ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಮಾರಂಭದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಸಿಎಂ ನಿರ್ಧಾರವನ್ನು ಬೆಂಬಲಿಸಿದರು. ಯೋಜನೆಯಲ್ಲಿ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸುವುದು ಸರ್ಕಾರದ ಕರ್ತವ್ಯ. ವ್ಯವಸ್ಥೆಯನ್ನು ಸರಿಹಾದಿಗೆ ತರುತ್ತಿರುವುದನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
