- ಆಣೆ ಪ್ರಮಾಣ ಕೈಬಿಡಿ – ವಿಜಯೇಂದ್ರಗೆ ಮಾಜಿ ಡಿಸಿಎಂ ಸಲಹೆ
ಶಿವಮೊಗ್ಗ: ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ಸಿಗರಿಂದಲೇ ಬಿಜೆಪಿ (BJP) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಬಳಿಕ ಅವರಿಂದಲೇ ಪಕ್ಷ ಹಾಳಾಯ್ತು. ಕಾಂಗ್ರೆಸ್‌ಗೂ (Congress) ಅದೇ ಪರಿಸ್ಥಿತಿ ಬರಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿಚಾರದಲ್ಲಿ ನಡೆಯುತ್ತಿರುವ ಆಣೆ ಪ್ರಮಾಣದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದರು. ಆಡಳಿತ ಪಕ್ಷ, ವಿರೋಧ ಪಕ್ಷ ರಾಜ್ಯದ ಅಭಿವೃದ್ದಿ ಬಗ್ಗೆ ಮಾತಾಡಬೇಕಿತ್ತು. ಕರ್ನಾಟಕದಲ್ಲಿ ಎಂಎಲ್‌ಸಿಗಳನ್ನು ಖರೀದಿ ಮಾಡುವ ಕೆಲಸ ಆಗಿದೆ. ಎಷ್ಟು ಭ್ರಷ್ಟಾಚಾರ ಆಗಿದೆ ಅಂತ ಹೊರಗೆ ಬರಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಕೆಹೆಚ್, ಪ್ರಿಯಾಂಕ್ ಮಾತನಾಡುವುದು ನೋಡಿದ್ರೇ ಹಿರಣ್ಯಕಶ್ಯಪುವಿಗಾದ ಶಿಕ್ಷೆ ಆಗಲಿದೆ: ಈಶ್ವರಪ್ಪ ಭವಿಷ್ಯ
ಹಿಂದೆ 17 ಜನ ಕಾಂಗ್ರೆಸ್‌ನಿಂದ ಬಂದವರನ್ನು ದುಡ್ಡು ಕೊಟ್ಟು ಕರೆದುಕೊಂಡಿದ್ದೆವು. ಅದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು. ನಂತರ ಪಕ್ಷ ಅವರಿಂದ ಹಾಳಾಗಿ ಹೋಯ್ತು. ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದು ಹೊರಗೆ ಬರಬೇಕು ಎಂದರು.
ಧರ್ಮಸ್ಥಳ ಪವಿತ್ರವಾದ ಸ್ಥಳ, ಅಲ್ಲಿ ಆಣೆ ಪ್ರಮಾಣ ಬೇಡ. ವಿಜಯೇಂದ್ರ ಅವರು ತಕ್ಷಣ ತಮ್ಮ ನಿಲುವನ್ನ ಹಿಂಪಡೆಯಬೇಕು. ಭಕ್ತಿಯನ್ನ ಒರೆ ಹಚ್ಚುವುದಲ್ಲ, ಹಾಗಾಗಿ ಈ ನಿರ್ಧಾರ ಕೈಬಿಡಬೇಕು. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ಅಣ್ಣಪ್ಪನ ಬಳಿ ಬಂದು ಕ್ಷಮೆ ಕೇಳ್ತಾರೆ. ಈ ಪದ್ಧತಿ ಒಳ್ಳೆಯದಲ್ಲ ಇದು ನನ್ನ ಸಲಹೆ ಎಂದಿದ್ದಾರೆ.
ಅಡ್ಡಮತದಾನದ ಭ್ರಷ್ಟಚಾರ ತನಿಖೆ ಆಗಬೇಕು. ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ಹೊರಬರಬೇಕು. ನಮ್ಮದೇ ಸರ್ಕಾರ ಇದ್ದಾಗ ದುಡ್ಡು ಕೊಟ್ಟು ಖರೀದಿ ಮಾಡಿ, ದುಡ್ಡು ಕೊಟ್ಟು ಗೆಲ್ಲಿಸಿದ್ವಿ. ಆದರೆ, ನಮ್ಮ ಸರ್ಕಾರ ನಂತರ ಅಧಿಕಾರಕ್ಕೆ ಬರಲಿಲ್ಲ. ಇದೇ ಪರಿಸ್ಥಿತಿ ಕಾಂಗ್ರೆಸ್‌ಗೂ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮಂಜುನಾಥನ ಮನೆಯಲ್ಲೂ ಸುಳ್ಳು ಪ್ರಮಾಣ ಮಾಡಿದರೆ ಹೇಗೆ: ಸುರೇಶ್ ಕುಮಾರ್ ಪ್ರಶ್ನೆ
