– ಅರ್ಹತಾ ಸುತ್ತಿನಲ್ಲಿ ಗೆದ್ದರಷ್ಟೇ ವಿಂಡೀಸ್ ವಿಶ್ವಕಪ್ ಪ್ರವೇಶ
ಮುಂಬೈ: ಮುಂದಿನ ವರ್ಷ ನಡೆಯಲಿರುವ ಬಹು ನಿರೀಕ್ಷಿತ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅಫ್ಘಾನಿಸ್ತಾನ (Afghanistan) ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದ್ರೆ 2 ಬಾರಿ ವಿಶ್ವಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ (West Indies) ತಂಡವು ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಹೌದು. 5 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನ ಸೋಲಿಸುವ ಮೂಲಕ ಅಫ್ಘಾನಿಸ್ತಾನ 2027ರ ವಿಶ್ವಕಪ್‌ಗೆ (2027 ODI World Cup) ಅರ್ಹತೆ ಪಡೆದುಕೊಂಡಿದೆ. ವಿಂಡೀಸ್ ಈಗಾಗಲೇ ಅಗ್ರ 8 ಸ್ಥಾನಗಳಿಂದ ಹೊರಗಿತ್ತು. ಆದ್ರೆ ಐರ್ಲೆಂಡ್ ವಿರುದ್ಧ ಅಫ್ಘಾನ್‌ನ ಗೆಲುವು ಕೆರಿಬಿಯನ್ ತಂಡ ಅರ್ಹತಾ ಸ್ಥಾನ ಪಡೆದುಕೊಳ್ಳಲು ಇದ್ದ ಏಕೈಕ ಚಾನ್ಸ್ ಕೂಡ ಕೈತಪ್ಪಿದೆ. ಹೀಗಾಗಿ ಅರ್ಹತಾ ಸುತ್ತಿನ ಮೂಲಕವೇ ವಿಶ್ವಕಪ್ ಪ್ರವೇಶಿಸುವುದು ಅನಿವಾರ್ಯವಾಗಿದೆ.


ಕಟ್-ಆಫ್ ದಿನಾಂಕ: ಸೆಪ್ಟೆಂಬರ್ 30
ಸಹ-ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 2027 ರ ವಿಶ್ವಕಪ್‌ಗೆ ಸ್ವಯಂಚಾಲಿತವಾಗಿ ಸ್ಥಾನಗಳನ್ನ ಪಡೆದುಕೊಂಡಿವೆ. ಆದರೆ ಉಳಿದ 8 ಸ್ಥಾನಗಳನ್ನ ಐಸಿಸಿ ಏಕದಿನ ಶ್ರೇಯಾಂಕಗಳ ಆಧಾರದ ಮೇಲೆ ನಿರ್ಧರಿಸುತ್ತದೆ. ಈ ಶ್ರೇಯಾಂಕಗಳಿಗೆ ಕಟ್-ಆಫ್ ದಿನಾಂಕ ಸೆಪ್ಟೆಂಬರ್ 30 ರವರೆಗೆ ನಿಗದಿ ಪಡಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ, ವೆಸ್ಟ್ ಇಂಡೀಸ್ 73 ಅಂಕಗಳೊಂದಿಗೆ 10ನೇ ಸ್ಥಾನಕ್ಕೆ ಕುಸಿದಿದ್ದರೆ, ಬಾಂಗ್ಲಾದೇಶ 83 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ, ಅಫ್ಘಾನಿಸ್ತಾನ ಕೂಡ 90 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.

6 ವಿಕೆಟ್ ಕಿತ್ತ ರಶೀದ್
ಅಫ್ಘಾನ್ ತಂಡವು 2ನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನ 92 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ, ರಶೀದ್ ಖಾನ್ ಅದ್ಭುತ ಬೌಲಿಂಗ್ ಮಾಡಿದರು. 34 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಿತ್ತರು. 299 ರನ್‌ಗಳ ಗುರಿ ಬೆನ್ನಟ್ಟಿದ ಐರಿಶ್ ತಂಡವು 207 ರನ್‌ಗಳಿಗೆ ಆಲೌಟ್ ಆಯಿತು. ಈ ಫಲಿತಾಂಶವು ಅಫ್ಘಾನಿಸ್ತಾನದ ಸ್ಥಾನವನ್ನ ಮತ್ತಷ್ಟು ಬಲಪಡಿಸಿತು. ಜೊತೆಗೆ ನೇರ ಅರ್ಹತೆ ಪಡೆಯಲು ವಿಂಡೀಸ್ ತಂಡಕ್ಕೆ ಇದ್ದ ಬಾಗಿಲನ್ನೂ ಬಂದ್ ಮಾಡಿತು.

ಭಾರತದ ವಿರುದ್ಧದ ಪಂದ್ಯ ಯಾವಾಗ?
ವಿಂಡೀಸ್ ತಂಡವು ಸೆಪ್ಟೆಂಬರ್ 27 ರಿಂದ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. 2ನೇ ಪಂದ್ಯವು ಸೆಪ್ಟೆಂಬರ್ 30 ರಂದು ಮತ್ತು 3ನೇ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದೆ. ಈ ಸರಣಿಯಲ್ಲಿ ವಿಡೀಸ್ ಗೆದ್ದರೂ ನೇರ ಅರ್ಹತೆ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿದೆ. ವೆಸ್ಟ್ ಇಂಡೀಸ್ ತಂಡವು 1975 ಮತ್ತು 1979 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದು ಗಮನಾರ್ಹ.
2027 ರ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ತಂಡಗಳು
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ.

