– ʻಲಾಠಿ ಏಟಿನ ಲೆಕ್ಕ ಕೇಳಿದ ವಿಪಕ್ಷಗಳ ಸಂಸದರು
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು (ಸೋಮವಾರ) ಮೊದಲ ಬಾರಿಗೆ ಸಂಸತ್ ಭವನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರಿಗೆ ಎನ್‌ಡಿಎ ಸಂಸದರು ಅದ್ಧೂರಿ ಸ್ವಾಗತ ಕೋರಿದರು.
ಸಂಸತ್ (Parliament) ಆವರಣದ ಮಕರದ್ವಾರದಲ್ಲಿ ಪೇಟ ತೊಡಿಸಿ, ಅದ್ಧೂರಿ ಸ್ವಾಗತ ಕೋರಿದ ಬಳಿಕ, ಎಲ್ಲಾ ಎನ್‌ಡಿಎ ಸಂಸದರು ಪೂರ್ಣ ಗೌರವದೊಂದಿಗೆ ಅವರನ್ನ ಸದನಕ್ಕೆ ಬರಮಾಡಿಕೊಂಡರು.
ಈ ಸ್ವಾಗತದ ಮೂಲಕ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅವರ ಆತ್ಮಸಾಕ್ಷಿಯಿಂದ ತೆಗೆದುಕೊಂಡ ಸ್ವಯಂಪ್ರೇರಿತ ನಿರ್ಧಾರ, ವಿದ್ಯಾರ್ಥಿಗಳು ಮತ್ತು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ. ಇಡೀ ಸರ್ಕಾರ (NDA Govt) ಮತ್ತು ಸಂಘಟನೆ ಅವರ ಹಿಂದೆ ದೃಢವಾಗಿ ನಿಂತಿದೆ ಎಂಬ ಸಂದೇಶ ಸಾರಿತು.

ಲಾಠಿ ಏಟಿನ ಲೆಕ್ಕ ಕೇಳಿದ ವಿಪಕ್ಷ ಸಂಸದರು
ಇನ್ನೂ ಮತ್ತೊಂದು ಕಡೆ ಪ್ರಧಾನ್ ಅವರು ಸಂಸತ್ ಆವರಣ ಪ್ರವೇಶಿಸುತ್ತಿದ್ದಂತೆ ವಿಪಕ್ಷಗಳ ಸಂಸದರು ʻಲಾಠಿ ಏಟಿನ ಲೆಕ್ಕ ಕೊಡಿʼ ಎಂದು ಘೋಷಣೆ ಕೂಗಿದ್ದಾರೆ. ಸಂಸದೆ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಘೋಷಣೆ ಕೂಗಿದರು.
ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಧರ್ಮೇಂದ್ರ ಪ್ರಧಾನ್ ಅವರು ಜು.25 ರಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಈ ಖಾತೆಯ ಹೆಚ್ಚುವರಿ ಹೊಣೆಯನ್ನು ಕರ್ನಾಟಕದ ಪ್ರಹ್ಲಾದ್ ಜೋಶಿ ಅವರಿಗೆ ನೀಡಲಾಯಿತು.
