– ನೆಗೆಟಿವ್ ಮಾಡಿದ್ರೆ ಯಾವ ನಿರ್ಮಾಪಕರು ಸಿನಿಮಾ ಮಾಡೋಕೆ ಬರುತ್ತಾರೆ?
ನಟ ಯಶ್ ಅವರ ಸಿನಿಮಾ ಪಯಣ, ಜನಪ್ರಿಯತೆ ಹಾಗೂ ಅಭಿಮಾನಿಗಳ ಪ್ರೀತಿಯ ಕುರಿತು ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಆಡಿರುವ ಮಾತುಗಳು ಗಮನ ಸೆಳೆಯುತ್ತಿವೆ. ಯಶ್ ಬಗ್ಗೆ ಹೊರದೇಶಗಳಿಂದಲೂ ಜನ ಮಾತನಾಡುತ್ತಿರುವುದನ್ನ ಉಲ್ಲೇಖಿಸಿರುವ ಅವರು, ಮಗನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಟಾಕ್ಸಿಕ್ ಯಶಸ್ಸಿನ ಬಗ್ಗೆ ʻಪಬ್ಲಿಕ್ ಟಿವಿʼಯೊಂದಿಗೆ (Public TV) ಮಾತನಾಡಿದ ಅವರು, ಹೊರ ದೇಶಗಳಿಂದ ಬಂದವರು ಯಶ್ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕಿಂತ ಭಾಗ್ಯ ಬೇರೆ ಏನಿದೆ? ಯಶ್ ಹಣ ಸಂಪಾದನೆ ಮಾಡದೇ ಇರಬಹುದು, ಬಡವನೇ ಇರಬಹುದು. ಆದರೆ, ಅವನು ಜನರನ್ನ ಸಂಪಾದನೆ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

‘ಯಶ್ ಯಾವ ಬೇರಿಂದ ಬಂದಿದ್ದಾನೆ ಅಂತ ಕೇಳುತ್ತಿಲ್ಲ’
ʻʻಯಶ್ ಯಾವ ಬೇರಿಂದ ಹುಟ್ಟಿ ಬಂದಿದ್ದಾನೆ ಎಂದು ಯಾರೂ ಕೇಳುತ್ತಿಲ್ಲ. ಅವನಲ್ಲಿ ಎಷ್ಟು ಕಲೆ ಇದೆ? ಏನು ಸಾಧನೆ ಮಾಡಿದ್ದಾನೆ? ಎನ್ನುವುದನ್ನು ನೋಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು, ಒಟ್ಟಿನಲ್ಲಿ ಈಗ ಏನು ಮಾಡ್ತಿದ್ದಾನೋ ಅದಕ್ಕಿಂತಲೂ ಮುಂದೆ ಜಾಸ್ತಿ ಮಾಡ್ತಾನೆ ಅನ್ನೋ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಶ್ ಬಯಸಿದ್ದರೆ ಒಂದಿಷ್ಟು ಸಿನಿಮಾಗಳಿಗೆ ಸೈನ್ ಮಾಡಿ ಮನೆಯಲ್ಲೇ ಕುಳಿತು ಹಣ ಸಂಪಾದಿಸಿಕೊಂಡು, ಟೂರ್ ಮಾಡಿಕೊಂಡು ಆರಾಮವಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಬೇರೆ ರೀತಿಯ ದಾರಿ ಆಯ್ಕೆ ಮಾಡಿಕೊಂಡಿದ್ದಾನೆ. ಟೂರ್ ಹೊಡೆದುಕೊಂಡು ಇರಬಹುದಿತ್ತು. ಇದೆಲ್ಲ ಬೇಕಿತ್ತಾ? ಯಾರಿಗೋಸ್ಕರ ಸಿನಿಮಾ ಮಾಡಿದ್ದಾನೆ? ಸಿನಿಮಾ ಜನರಿಗಾಗಿ ತಾನೆ ಮಾಡಿದ್ದಾನೆ ಎಂದು ಪ್ರಶ್ನಿಸಿದ್ದಾರೆ.

‘ನಿರ್ಮಾಪಕರನ್ನ ಉಳಿಸಿಕೊಳ್ಳಬೇಕು’
ಕನ್ನಡ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಯಶ್ ಅವರ ತಾಯಿ ಕಳವಳ ವ್ಯಕ್ತಪಡಿಸಿದ್ದಾರೆ. ʻನೆಗೆಟಿವ್ ಮಾಡಿದರೆ ಮುಂದೆ ಯಾವ ನಿರ್ಮಾಪಕರು ಸಿನಿಮಾ ಮಾಡೋಕೆ ಬರುತ್ತಾರೆ? ನಿರ್ಮಾಪಕರನ್ನ ಉಳಿಸಿಕೊಳ್ಳಬೇಕು. ಯಶ್ ಬೆಳೆದಿದ್ದಾನೆ, ಆದರೆ ನಿರ್ಮಾಪಕರು ಎಲ್ಲಿ ಹೋಗಬೇಕು? ಮೊದಲೇ ಕನ್ನಡದಲ್ಲಿ ಉತ್ತಮ ಸಿನಿಮಾಗಳು ಬರುತ್ತಿಲ್ಲ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ, ಹಲವು ಥಿಯೇಟರ್‌ಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಈ ಸಮಸ್ಯೆಗಳನ್ನ ಸರಿಪಡಿಸಲು ನಿರ್ಮಾಪಕರನ್ನ ಉಳಿಸಿಕೊಳ್ಳುವುದು ಅಗತ್ಯ ಅಲ್ವೇ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ಬರುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಹಾಕುತ್ತಾರೆ. ಇವೆಲ್ಲವನ್ನೂ ಬಿಗಿಗೊಳಿಸಬೇಕು. ಚಿತ್ರರಂಗವನ್ನು ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
